ಚುಟುಕು ಸುದ್ದಿಗಳು

Update: 2016-09-11 18:34 GMT

ವಿವಿಧೆಡೆ ಮಟ್ಕಾ ದಾಳಿ: ಮೂವರ ಸೆರೆ

ಬ್ರಹ್ಮಾವರ, ಸೆ.11: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಅಕ್ಷಯ ಪಾನ್‌ಸ್ಟಾಲ್ ಬಳಿ ಸೆ.10ರಂದು ಸಂಜೆ ವೇಳೆ ಮಟ್ಕಾ ಜುಗಾರಿ ನಡೆಸುತ್ತಿದ್ದ ಹೇರೂರಿನ ಸತೀಶ ಶೆಟ್ಟಿ(27) ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿಸಿದ್ದಾರೆ.

ಬೈಂದೂರು: ಬಿಜೂರು ಗ್ರಾಮದ ಕಂಚಿಕಾನ್ ರೈಲ್ವೆ ಗೇಟ್ ಬಳಿ ಸೆ.10 ರಂದು ಅಪರಾಹ್ನ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಪ್ಪುಂದ ಮೆಡಿಕಲ್‌ನ ಸದಾಶಿವ ಪೂಜಾರಿ(42) ಎಂಬಾತನ್ನು ಬೈಂದೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲ: ಅಲೆವೂರು ಜೋಡುರಸ್ತೆಯ ಬಳಿ ಸೆ.10ರಂದು ಸಂಜೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಪೆರಂಪಳ್ಳಿಯ ರಾಜೇಶ್ ನೆಲ್ಸನ್ ಡಿಸೋಜ(39) ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊಬೈಲ್ ಅಂಗಡಿಗೆ ನುಗ್ಗಿ ಕಳವು

ಶಂಕರನಾರಾಯಣ, ಸೆ.11: ಹಾಲಾಡಿ ಪೇಟೆಯಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ಸೆ.9ರಂದು ರಾತ್ರಿ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

‘ಬಾಂಧವ್ಯ’ ಮೊಬೈಲ್ ಅಂಗಡಿಯ ಮಾಡಿನ ಹೆಂಚು ತೆಗೆದು ಸೀಲಿಂಗ್ ಮುರಿದು ಒಳನುಗ್ಗಿದ ಕಳ್ಳರು 20,000ರೂ. ಮೌಲ್ಯದ ಮೊಬೈಲ್, ಬ್ಯಾಟರಿ, ಮೆಮೊರಿ ಕಾರ್ಡ್, ಸಿಸಿ ಟಿವಿಯ ಕ್ಯಾಮರವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ

 ಬ್ರಹ್ಮಾವರ, ಸೆ.11: ಐದು ತಿಂಗಳುಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ರವಿವಾರ ಬೆಳಗ್ಗೆ ಉಪ್ಪೂರು ಗ್ರಾಮದ ಜಾತಬೆಟ್ಟು ಬಳಿಯಿರುವ ಹಾಡಿಯಲ್ಲಿ ಪತ್ತೆಯಾಗಿದೆ.

ಬೈಕಾಡಿ ಗ್ರಾಮದ ಭದ್ರಗಿರಿಯ ಜಾನ್ ಡಿಸಿಲ್ವ(72) ಎಂಬವರು ಮೇ 26ರಂದು ಬ್ರಹ್ಮಾವರಕ್ಕೆ ಟೆಲಿಫೋನ್ ಬಿಲ್ ಕಟ್ಟಲೆಂದು ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ರವಿವಾರ ಜಾತಬೆಟ್ಟು ಬಳಿಯ ಹಾಡಿಯಲ್ಲಿ ಅವರ ಪ್ಯಾಂಟ್, ಶರ್ಟ್ ಮತ್ತು ಮೂಳೆಗಳು ಪತ್ತೆಯಾಗಿದೆ.

ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಇವರು ಹಾಡಿಯೊಳಗೆ ಹೋಗಿ ವಾಪಸ್ ಬರಲು ದಾರಿ ತಿಳಿಯದೆ ಹಾಡಿಯೊಳಗೆ ಆಹಾರ ನೀರು ಇಲ್ಲದೇ ಮಲಗಿದ್ದಲೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗಳ ಮಧ್ಯೆ ಢಿಕ್ಕಿ: ಸವಾರರಿಗೆ ಗಾಯ

ಕಡಬ, ಸೆ.11: ಮರ್ದಾಳ ಸಮೀಪದ ಮಿತ್ತೋಡಿ ಎಂಬಲ್ಲಿ ಬೈಕ್‌ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರೂ ಗಾಯಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ.

ಗಾಯಗೊಂಡ ಸವಾರರನ್ನು ಬೊಳ್ಳೂರು ನಿವಾಸಿ ತಂಗಚ್ಚನ್ ಹಾಗೂ ಇನ್ನೋರ್ವ ಸವಾರ ಮರ್ದಾಳ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ತಂಗಚ್ಚನ್‌ರ ಕಾಲು ಮುರಿದಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಳು ಸಾಗಾಟ: ಲಾರಿ ಪೊಲೀಸ್ ವಶಕ್ಕೆ

ಮೂಡುಬಿದಿರೆ, ಸೆ.11: ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿದ್ದ ಟಿಪ್ಪರೊಂದನ್ನು ಅಲಂಗಾರಿನಲ್ಲಿ ಶನಿವಾರ ಮೂಡುಬಿದಿರೆ ಪೊಲೀಸರು ವಾಹನ ತಪಾಸಣೆ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿ ಮಾರ್ಪಾಡಿ ಗ್ರಾಮದ ಅಲಂಗಾರು ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದಭರ್ ಗಂಜಿಮಠ ಕಡೆಯಿಂದ ಕಾರ್ಕಳದ ಕಡೆಗೆ ಪರವಾನಿಗೆ ರಹಿತ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಕಸಾಯಿಖಾನೆ: ಮೂವರ ಸೆರೆ

ಕೋಟ, ಸೆ.11: ಕೋಡಿಕನ್ಯಾನ ಗ್ರಾಮದ ಮನೆಯೊಂದರಲ್ಲಿನ ಅಕ್ರಮ ಕಸಾಯಿಖಾನೆಗೆ ರವಿವಾರ ಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮನೆಯ ಮಾಲಕ ಅಬ್ದುಲ್ ಮುನೀರ್(51), ಅಸ್ಲ್ಲಮ್ (30), ಮುಹಮ್ಮದ್ ಫಿರೋಝ್(19) ಎಂದು ಗುರುತಿಸಲಾಗಿದೆ. ಇವರಿಂದ 65ಕೆ.ಜಿ. ತೂಕದ 9,750ರೂ. ಮೌಲ್ಯದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎನ್ನೆಸ್ಸೆಸ್‌ನ ವಾರ್ಷಿಕಕಾರ್ಯಕ್ರಮಗಳ ಉದ್ಘಾಟನೆ

ಮುಲ್ಕಿ, ಸೆ.11: ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‌ಸಿಸಿ ತರಬೇತಿಗಳು ದೇಶಕಟ್ಟುವ ಕೇಂದ್ರಗಳು ಎಂದು ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ಹೇಳಿದರು.

ಮುಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜು ಎನ್ನೆಸ್ಸೆಸ್‌ನ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಲ್ಕಿ ಗೃಹರಕ್ಷಕದಳದ ಘಟಕಾಧಿಕಾರಿ ಎಚ್.ಮನ್ಸೂರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವಾ, ಡಾ. ಜಗದೀಶ್, ಪ್ರೊ.ವೆಂಕಟೇಶ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಅನುಸೂಯಾ ಟಿ. ಕರ್ಕೇರಾ, ವಿದ್ಯಾರ್ಥಿ ನಾಯಕ ಪ್ರವೀಣ ಕುಮಾರ್, ಕಾರ್ಯದರ್ಶಿಗಳಾದ ಸೌಮ್ಯಾ ಶೆಣೈ, ಪ್ರಜ್ವಲ್ ಆಚಾರ್ಯ ಉಪಸ್ಥಿತರಿದ್ದರು.

ಸೂಕ್ತ ಭದ್ರತೆಗೆ ಆಗ್ರಹಿಸಿ ಮನವಿ

 ಮಂಗಳೂರು, ಸೆ.11: ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮತ್ತು ಸೂಕ್ತ ಭದ್ರತೆ ಕಲ್ಪಿಸುವಂತೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ವಲಯ ಸಮಿತಿ ವತಿಯಿಂದ ಶನಿವಾರ ಸುರತ್ಕಲ್ ಠಾಣಾಧಿಕಾರಿ ಚೆಲುವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸುರತ್ಕಲ್ ವಲಯಾಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ತೌಫೀಕ್ ಸುರತ್ಕಲ್, ಸಮಿತಿ ಸದಸ್ಯ ಇಸ್ಮಾಯೀಲ್, ಸುರತ್ಕಲ್ ಏರಿಯಾ ಅಧ್ಯಕ್ಷನವಾಝ್ ಸುರತ್ಕಲ್‌ಉಪಸ್ಥಿತರಿದ್ದರು.

ಅವಹೇಳನ: ಕಟೀಲಿನಲ್ಲಿ ಸಾಮೂಹಿಕ ಪ್ರಾರ್ಥನೆ

ಮುಲ್ಕಿ, ಸೆ.11: ಸಾಮಾಜಿಕ ಜಾಲತಾಣದಲ್ಲಿ ಕಟೀಲು ದೇವಿಯ ಹಾಗೂ ಇತರ ಹಿಂದೂ ದೇವರ ಬಗ್ಗೆ ಅವಹೇಳನ ರೀತಿಯಲ್ಲಿ ಬರಹಗಳನ್ನು ಪ್ರಕಟಿಸಿದ ದುಷ್ಕರ್ಮಿಗಳ ಕೃತ್ಯಗಳನ್ನು ಖಂಡಿಸಿ ದೇವಳದಲ್ಲಿ ವಿಶೇಷ ಪ್ರಾರ್ಥನೆ ರವಿವಾರ ನಡೆಯಿತು.

  

ಈ ಸಂದರ್ಭ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ, ಕೇಮಾರು ಸಾಂದೀಪಿನಿ ಮಠದ ಈಶ ವಿಠಲದಾಸ ಸ್ವಾಮಿ, ಮಾಣಿಲ ಶ್ರೀಧಾಮ ಮೋಹನದಾಸ ಸ್ವಾಮೀಜಿ, ಶಾಂತಿಗೋಡು ಮಣಿಕಾಂತ ಸ್ವಾಮೀಜಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಆರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾ ದೇವಿ ಪ್ರಸಾದ ಆಸ್ರಣ್ಣ , ಹರಿನಾರಯಣದಾಸ ಆಸ್ರಣ್ಣ, ರಾಜೇಶ್ ನಾಯಕ್ ಉಳೆಪಾಡಿ ಗುತ್ತು, ರುಕ್ಮಯ್ಯ ಪೂಜಾರಿ, ಈಶ್ವರ್ ಕಟೀಲ್, ಕಿರಣ್ ಕುಮಾರ್ ಶೆಟ್ಟಿ, ಯಾದವ ಕೊಟ್ಯಾನ್, ಅಭಿಲಾಷ್ ಶೆಟ್ಟಿ, ದೇವದಾಸ್ ಶೆಟ್ಟಿ ಬಂಟ್ವಾಳ, ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

ಅಬ್ದುರ್ರಹ್ಮಾನ್ ಹಾಜಿ ಪಯ್ಯಕ್ಕಿ

ಮಂಗಳೂರು, ಸೆ.11: ಮಂಜನಾಡಿ ಸಿಪಿ ಉಸ್ತಾದ್‌ರ ಖಾದಿಂ ಆಗಿದ್ದ ಅಬ್ದುರ್ರಹ್ಮಾನ್ ಹಾಜಿ ಪಯ್ಯಕ್ಕಿ (61) ಪಯ್ಯಕ್ಕಿ ಲಾಲ್ಭಾಗ್ ಕಂಡತಡ್ಕದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಐವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ದೇವರಾಜ ಶೇರಿಗಾರ್

ಮುಲ್ಕಿ, ಸೆ.11: ಕೋಟೆಕೇರಿ ನಿವಾಸಿ ದೇವರಾಜ ಎಸ್.ಶೇರಿಗಾರ್ ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News