ಮಂಗಳೂರಿನಲ್ಲಿ ಬಕ್ರೀದ್ ಹಬ್ಬದ ಸಡಗರ
ಮಂಗಳೂರು, ಸೆ.12:ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ (ಈದುಲ್ ಅಝ್ ಹಾ) ಹಬ್ಬವನ್ನು ಮಂಗಳೂರಿನಲ್ಲಿ ಇಂದು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ, ಉಳ್ಳಾಲ ಕೇಂದ್ರ ಜುಮಾ ಮಸೀದಿ ಸಹಿತ ನಗರದ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈದ್ ನಮಾಝ್ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಸ್ತ ಲಾಘವ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಆ ಬಳಿಕ ಬಂಧು ಮಿತ್ರರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಬಾವುಟಗುಡ್ಡೆಯ ಈದ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿ ಹಬ್ಬದ ಸಂದೇಶ ನೀಡಿದರು.
ಇದೇ ವೇಳೆ ನಡೆದ ಸಮಾರಂಭದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ , ಈದ್ ಹಬ್ಬದ ತ್ಯಾಗ, ಬಲಿದಾನದ ಸಂದೇಶವನ್ನು ಪಾಲಿಸಿಕೊಂಡು ಸಹೋದರತೆಯೊಂದಿಗೆ ಎಲ್ಲರೊಂದಿಗೆ ಕೈಜೋಡಿಸಿದರೆ ಎಲ್ಲರೂ ಒಗ್ಗಟ್ಟಿನಲ್ಲಿರಲು ಸಾಧ್ಯ. ಹಿರಿಯರ ತ್ಯಾಗವನ್ನು ಅರ್ಥ ಮಾಡಿಕೊಂಡು ಸಹೋದರತೆ, ಏಕತೆಯೊಂದಿಗೆ ಬಾಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಸಹೋದರತೆ ಮತ್ತು ತ್ಯಾಗದ ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂದು ಸಂದೇಶ ಸಾರಿದ ಹಬ್ಬದ ಸಂದೇಶವನ್ನು ಪಾಲಿಸುತ್ತಾ ಪ್ರೀತಿ ವಿಶ್ವಾಸದಿಂದ ಎಲ್ಲರನ್ನು ಗೆಲ್ಲಬೇಕು ಎಂದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಾಗಿ, ಯಾವುದೆ ಭಿನ್ನಾಭಿಪ್ರಾಯವಿಲ್ಲದೆ ಶಾಂತಿ ಸಹೋದರತೆಯಿಂದ ಬಾಳಿದರೆ ಅಭಿವೃದ್ದಿ ಬರಲು ಸಾಧ್ಯ. ಎಲ್ಲ ಧರ್ಮಗಳ ಜೊತೆ ಸಾಮರಸ್ಯ ಬೆಳೆಸುತ್ತಾ ಅಭಿವೃದ್ದಿ ಸಾಧಿಸಬೇಕಾಗಿದೆ ಎಂದರು.
ಮನಪಾ ಮೇಯರ್ ಹರಿನಾಥ್ ಮಾತನಾಡಿ ತ್ಯಾಗ ಬಲಿದಾನದ ಸಂಕೇತವಾಗಿರುವ ಹಬ್ಬ ಎಲ್ಲರಿಗೂ ಶುಭ ತರಲಿ ಎಂದು ಶುಭ ಹಾರೈಸಿದರು.
ವಿಹಿಂಪ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಭಾರತ ಹಲವು ಧರ್ಮ, ಮತಗಳ ಬೀಡು. ಎಲ್ಲ ಧರ್ಮಗಳು ಸೇರಿದರೆ ಒಂದು ದೇಹವಿದ್ದಂತೆ. ಯಾವುದೆ ಧರ್ಮಕ್ಕೂ ನೋವಾದರೂ ಅದು ದೇಹದ ಒಂದು ಅಂಗಕ್ಕೆ ನೋವಾದಂತೆ. ಆದುದರಿಂದ ಎಲ್ಲರೂ ಪ್ರೀತಿ, ಭ್ರಾತೃತ್ವದಿಂದ ಬಾಳುವಂತಾಗಬೇಕು. ಇಂದು ನಡೆಯುವ ಹಬ್ಬ ಎಲ್ಲ ಸಮಾಜದ ಹಬ್ಬ ಎಂದರು.
ಮಂಗಳೂರು ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್ ಮಾತನಾಡಿ, ಬಲಿದಾನ ತ್ಯಾಗ ಮತ್ತು ಕೃತಜ್ಞತೆ ಇದ್ದರೆ ಮಾತ್ರ ದೇವರಿಗೆ ಮನುಷ್ಯ ಹತ್ತಿರವಾಗುತ್ತಾನೆ. ಈಗ ಎಲ್ಲಡೆಯೂ ಸ್ವಾರ್ಥ ತುಂಬಿದೆ. ಈ ನೆಲೆಯಲ್ಲಿ ತ್ಯಾಗ, ಬಲಿದಾನದ ಸಂದೇಶ ನೀಡುವ ಹಬ್ಬ ಮಹತ್ವದಾಗಿದೆ ಎಂದರು.
ಮಾಜಿ ಸಚಿವ ಬಿ.ಎ.ಮೊಹಿದಿನ್ ಮಾತನಾಡಿ, ಈ ಹಬ್ಬದ ಮೂಲಕ ಸಹೋದರತೆಯನ್ನು ಸಾರಬೇಕಾಗಿದೆ. ನೆರೆಯವರನ್ನು ಸಹೋದರತೆಯಿಂದ ಕಂಡರೆ ಇಸ್ಲಾಂ ಧರ್ಮದ ಸಾರವನ್ನು ಪಾಲಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನೆರೆಯವರೊಂದಿಗೆ ಸಹೋದರತೆಯನ್ನು ಬೆಳೆಸಬೆಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಸಂತೋಷ,ಉಲ್ಲಾಸವನ್ನು ತರುವ ಹಬ್ಬದೊಂದಿಗೆ ಅದರ ಹಬ್ಬದ ವೌಲ್ಯ, ಪರಂಪರೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಬ್ಬಗಳು ಬಿರುಕುಬಿಟ್ಟ ಮನಸ್ಸನ್ನು ಒಂದುಗೂಡಿಸುವ ಸೇತುವೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಪ್ರಾರ್ಥನಾ ಮಂದಿರದ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಹನೀಫ್, ಸಂತ ಅಲೋಶಿಯಸ್ ಕಾಲೇಜಿನ ಫಾ. ಫ್ರಾನ್ಸಿಸ್ ಅಲ್ಮೇಡಾ, ಪ್ರದೀಪ್, ಮೆಲ್ವಿನ್, ಬಾಷ ತಂಙಳ್, ಹನೀಫ್ ಹಾಜಿ, ಮನಪಾ ಸದಸ್ಯ ನವೀನ್ ಡಿಸೋಜ, ಮುಹಮ್ಮದ್ ಉಪಸ್ಥಿತರಿದ್ದರು. ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು.