ಮೂವರು ಮಕ್ಕಳನ್ನು ಬಾವಿಗೆ ನೂಕಿ, ದೇವಸ್ಥಾನದಲ್ಲಿ ಅಡಗಿದ್ದ ಮಹಿಳೆಯ ಬಂಧನ

Update: 2016-09-12 07:10 GMT

ಅಂಗುಲ್ : ತನ್ನ ಮೂರು ಮಂದಿ ಅಪ್ರಾಪ್ತ ಪುತ್ರರನ್ನು ಬಾವಿಗೆ ನೂಕಿ ನಂತರ ತಾನೂ ಬಾವಿಗೆ ಹಾರಿ ಹಾರಿ ಆತ್ಮಹತ್ಯೆಗೈಯ್ಯಲು ವಿಫಲ ಯತ್ನ ನಡೆಸಿದ್ದ ಮಹಿಳೆಯೊಬ್ಬಳನ್ನು ಒಡಿಶಾದ ಅಂಗುಲ್ ಜಿಲ್ಲೆಯ ಗುರುಜಂಗ್ ಗ್ರಾಮದಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಸೌಭಾಗಿನಿ ಬೆಹೆರ ಎಂದು ಗುರುತಿಸಲಾಗಿದೆ. ಬಾವಿಗೆ ಹಾರಿದ್ದ ಆಕೆಯನ್ನು ಶನಿವಾರ ರಕ್ಷಿಸಿದ ನಂತರ ಆಕೆ ಪರಾರಿಯಾಗಿದ್ದಳು. ರವಿವಾರದಂದು ಆಕೆ ಅಲ್ಲಿನ ದೇವಸ್ಥಾನವೊಂದರಲ್ಲಿ ಅಡಗಿದ್ದಾಳೆಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಧಾವಿಸಿ ಆಕೆಯನ್ನು ಬಂಧಿಸಿದ್ದಾರೆ.
ಆಕೆ ತನ್ನ ಆರು, ನಾಲ್ಕು ಹಾಗೂ ಮೂರರ ಹರೆಯದ ಪುತ್ರರನ್ನು ಬಾವಿಗೆ ನೂಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳನ್ನು ಉಳಿಸುವ ಪ್ರಯತ್ನಗಳು ವಿಫಲವಾಗಿದ್ದವು.
ಆಕೆಯ ಈ ಕೃತ್ಯದ ಹಿಂದಿನ ಕಾರಣ ಕಂಡುಕೊಳ್ಳುವ ಸಲುವಾಗಿ ಪೊಲೀಸರು ಆಕೆಯ ವಿಚಾರಣೆ ನಡೆಸುತ್ತಿದ್ದಾರೆ. ಮನೆಯ ಏಕೈಕ ಆಧಾರವಾಗಿದ್ದ ಆಕೆಯ ಪತಿ ತಾನು ಮಾಡಿದ ಯಾವುದೋ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದುದರಿಂದ ತನ್ನ ಮೂವರು ಮಕ್ಕಳನ್ನು ಸಲಹಲು ಆಕೆ ಕಷ್ಟಪಡುತ್ತಿದ್ದುದೇ ಆಕೆಯ ಈ ಕೃತ್ಯಕ್ಕೆ ಕಾರಣವಾಗಿರಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News