ಬಂಗಾರಪ್ಪರ ಹಾದಿಯಲ್ಲಿ ನಡೆಯಿರಿ: ಸಿಎಂಗೆ ಜನಾರ್ದನ ಪೂಜಾರಿ ತಾಕೀತು
ಮಂಗಳೂರು, ಸೆ.12: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಡೆದ ಸರ್ವಪಕ್ಷ ಸಭೆಯ ನಿರ್ಧಾರ ವನ್ನು ಪಾಲಿಸಲು ಸಿಎಂ ಬದ್ಧತೆ ತೋರಿಸಿಲ್ಲ. 24 ಗಂಟೆಯೊಳಗೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ರಾಜ್ಯದ ಜನರಿಗೆ ನಿಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಬೇಕು. ಸುಪ್ರೀಂ ಕೋರ್ಟ್ ಟೀಕಿಸಿದರೆ ನೀವು ಕುರ್ಚಿ ಬಿಡಬೇಕು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಾಕೀತು ಮಾಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜ್ಯದ 6 ಕೋಟಿ ಜನರ ಒಳಿತಿಗಾಗಿ ನಿರಂತರ ಶ್ರಮಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷರೂ ಈವರೆಗೆ ಮಾತಾಡಿಲ್ಲ. ರಾಜ್ಯದ ಜನರ ಭಾವನೆ ಅರಿಯದಿದ್ದರೆ ಅವರೂ ಆ ಸ್ಥಾನಕ್ಕೆ ಅನರ್ಹ. ಉಸ್ತುವಾರಿ ಮುಖ್ಯವೇ , ರಾಜ್ಯದ ಜನರು ಮುಖ್ಯವೇ ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್‌ಗೆ ಪೂಜಾರಿ ಉತ್ತರ ಕೊಡುತ್ತಾರೆ. ಹೈಕಮಾಂಡ್ ನನಗೆ ನೋಟಿಸ್ ಕೊಡಲಿ. ಆಗ ಸರಿಯಾದ ಉತ್ತರ ಕೊಡುತ್ತೇನೆ. ಯಾವ ಶಿಕ್ಷೆಯನ್ನು ಅನುಭವಿಸಲು ಕೂಡಾ ನಾನು ಸಿದ್ಧ. ಎಂದು ಹೇಳಿದರು.
ಉಚ್ಛಾಟನೆ ಬಳಿಕ ಅವರ ದಾರಿ ಮುಗಿಯುತ್ತದೆ. ನಾನು ಪ್ರತಿದಿನ ಪ್ರೆಸ್‌ಮೀಟ್ ಮಾಡುತ್ತೇನೆ. ಅವರ ಮನಸ್ಸಿನಲ್ಲಿ ನಾನು ಪಕ್ಷದ ವಿರುದ್ಧ ಎಂಬ ಭಾವನೆ ಇದೆ. ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಆಸ್ಕರ್, ಮೊಯ್ಲಿ, ವಿಶ್ವನಾಥ್, ಧರಂ ಸಿಂಗ್ ಪಕ್ಷ ಕಟ್ಟಿದವರು. ಖರ್ಗೆ ಅವರೂ ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದರು ಎಂದರು.
ಕಾವೇರಿ ವಿವಾದ ಬಗೆಹರಿಸುವಲ್ಲಿ ತಜ್ಞರ ಶಕ್ತಿ ಕಡಿಮೆಯಾಗಿದೆ ಎಂಬ ಕಾವೇರಿ ಹೋರಾಟ ತಜ್ಞರ ಸಮಿತಿ ಅಧ್ಯಕ್ಷ ಶಶಿಶೇಖರ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪೂಜಾರಿ, ಅವರು 1981ರಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಮಿಳುನಾಡಿನ ಮೇಲೆ ಮೋಹ ಏಕೆ ಎಂದು ಪ್ರಶ್ನಿಸಿದರು.
ಕಾವೇರಿ ವಿಚಾರದಲ್ಲಿ ದೇವೇಗೌಡರು ಬುದ್ಧಿವಂತಿಕೆಯ ಮಾತುಗಳನ್ನಾಡುತ್ತಿದ್ದಾರೆ. ಜೆಡಿಎಸ್ ನಾಯಕರ ಸರ್ಕಸ್ಸನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಅವರಿಗೆ ಬದ್ಧತೆ ಇದ್ದರೆ ರಾಜ್ಯದ ಎಲ್ಲ ಎಂಪಿಗಳು, ಪಾಲಿಕೆ ಕಾರ್ಪೊರೇಟರ್‌ಗಳು ರಾಜೀನಾಮೆ ನೀಡಲಿ. ಉಳಿದವರ ರಾಜೀನಾಮೆಗೂ ಅಗ್ರಹಿಸಲಿ. ಆಗ ಸಮಸ್ಯೆ ಮುಗಿಯುತ್ತದೆ. ರಾಜೀನಾಮೆಯಿಂದ ರಾಜ್ಯದ ಜನರಿಗೆ ಶಕ್ತಿ ಬರುತ್ತದೆ ಎಂದು ಪೂಜಾರಿ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪೂಜಾರಿ, ಕಾವೇರಿ ವಿಚಾರದಲ್ಲಿ ರಾಜ್ಯದ ಜೊತೆ ಕೇಂದ್ರ ಸರಕಾರವೂ ವಿಫಲವಾಗಿದೆ. ಪ್ರಧಾನಿ ಮೋದಿ ಅವರು ಮೂರು ಸಿಎಂಗಳ ಸಭೆ ಕರೆಯಬೇಕಿತ್ತು. ಯಡಿಯೂರಪ್ಪಅವರಿಗೂ ಕೇಂದ್ರದ ಮೇಲೆ ಒತ್ತಡ ಹಾಕಬಹುದಿತ್ತು. ಆದರೆ ಆ ಧೈರ್ಯ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.