ಜನರನ್ನು ಅಣಕಿಸಿ ಶೌಚಾಲಯ ಹೊಂದುವಂತೆ ಮಾಡಲು ಯತ್ನಿಸುತ್ತಿರುವ ಸರಕಾರ

Update: 2016-09-12 08:45 GMT

ನವದೆಹಲಿ : ಭಾರತ ಸರಕಾರವು  ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಜನರಿಗೆ ಶೌಚಾಲಯ ಕಟ್ಟಲು ಉತ್ತೇಜಿಸುತ್ತಿದೆ. ಹಾಗೂ ಈಗಾಗಲೇ ಜನರು ಬಯಲು ಶೌಚ ನಡೆಸುತ್ತಿರುವ ಹಲವಾರು ಕಡೆಗಳಲ್ಲಿ ಶೌಚಾಲಯ ನಿರ್ಮಿಸಿದೆ.

ಇತ್ತೀಚಿಗಿನ ಒಂದು ಬೆಳವಣಿಗೆಯಲ್ಲಿ ಸರಕಾರ ಬಿಡುಗಡೆಗೊಳಿಸಿರುವ ಹಲವಾರು ಜಾಹೀರಾತುಗಳಲ್ಲಿ ಬಯಲು ಶೌಚ ನಡೆಸುವವರನ್ನು ಮೂದಲಿಸಲಾಗಿದೆ ಹಾಗೂ ಶೌಚಾಲಯ ಕಟ್ಟುವಂತೆ ಅವರನ್ನು ಪ್ರೇರೇಪಿಸಲು ಪ್ರಯತ್ನಿಸಲಾಗಿದೆ. ಕೇಂದ್ರ ಸರಕಾರದ ಯೋಜನೆಯಂತೆ 2019 ರ ಒಳಗಾಗಿ ಭಾರತವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡುವ ಉದ್ದೇಶವಿದೆ.
ಟಿವಿ ಜಾಹೀರಾತುಗಳು ಹಾಗೂ ಹಲವಾರು ಜಾಹೀರಾತು ಫಲಕಗಳು ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂಬ ಪರಿಕಲ್ಪನೆಯನ್ನೇ ಅಣಕಿಸುತ್ತಿದ್ದು ‘‘ಶೌಚಾಲಯವನ್ನು ಉಪಯೋಗಿಸುವ ಅಭ್ಯಾಸವೇ ನಿಜವಾದ ಅಭಿವೃದ್ಧಿಯನ್ನು ಸೂಚಿಸುತ್ತದೆ,’’ಎನ್ನುವ ಘೋಷವಾಕ್ಯವೂ ಮೊಳಗುತ್ತಿವೆ. ಹೆಚ್ಚಿನ ಜಾಹೀರಾತುಗಳಲ್ಲಿ ಬಯಲು ಶೌಚ ಮಾಡುವವರನ್ನು ಮೂದಲಿಸುವವರು ಮಕ್ಕಳಾಗಿದ್ದಾರೆ.
‘‘ಅಂಕಲ್, ನೀವು ಕುತ್ತಿಗೆಗೆ ಟೈ, ಕಾಲಿಗೆ ಶೂ ಹಾಕುತ್ತೀರಿ, ಆದರೂ ಬಯಲು ಪ್ರದೇಶದಲ್ಲಿ ಶೌಚ ಮಾಡುತ್ತೀರಿ. ಇದು ಯಾವ ವಿಧದ ಪ್ರಗತಿ ?,’’ ಎಂದು ಬಾಲಕನೊಬ್ಬ ಒಂದು ಜಾಹೀರಾತಿನಲ್ಲಿ ಪ್ರಶ್ನಿಸುತ್ತಾನೆ. ‘‘ನಿಮ್ಮ ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಇದೆ ಆದರೂ ನೀವು ರೈಲ್ವೇ ಹಳಿಗಳಲ್ಲಿ ಶೌಚ ಮಾಡುತ್ತೀರಿ,’’ಎಂದು ಇನೊಬ್ಬ ಹೇಳುತ್ತಾನೆ.
ಶೌಚಾಲಯ ಹೊಂದಿಲ್ಲದ ಫ್ಲ್ಯಾಟ್ ಟಿವಿ, ರೆಫ್ರಿಜರೇಟರ್ ಹಾಗೂ ಮೋಟಾರ್ ಸೈಕಲ್ ಖರೀದಿಸುವವರನ್ನೂ ಮಕ್ಕಳು ಅಣಕಿಸುವ ಜಾಹೀರಾತು ಇದೆ.
2006 ಹಾಗೂ 2012 ರ ನಡುವೆ ಶೇ.100 ರಷ್ಟು ಶೌಚಾಲಯ ಹೊಂದಿದ ಸುಮಾರು 6000 ಗ್ರಾಮಗಳಿಗೆ ಬಹುಮಾನ ನೀಡಲಾಗಿತ್ತಾದರೂ ಹಲವಾರು ಗ್ರಾಮಗಳು ಶೌಚಾಲಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲು ವಿಫಲವಾಗಿದ್ದವು.
ಒಂದು ಜಾಹೀರಾತಿನಲ್ಲಂತೂ ಸೆರಗಿನಿಂದ ಮುಖ ಮುಚ್ಚಿಕೊಂಡ ಮಹಿಳೆಯರು ಬಯಲು ಶೌಚಾಲಯಕ್ಕೆ ಹೋಗುವುದನ್ನು ಪುರುಷರು ಟೀಕಿಸುವ ದೃಶ್ಯವಿತ್ತು. ಕೆಲವು ಕಡೆ ಶೌಚಾಲಯವಿಲ್ಲದ ಮನೆಗಳ ಯುವಕರನ್ನು ಯುವತಿಯರು ವಿವಾಹವಾಗಲು ನಿರಾಕರಿಸಿದ ಘಟನೆಗಳೂ ನಡೆದಿದ್ದವು.
ಆದರೆ ಇದೀಗ ಸರಕಾರ ಆಧನಿಕತೆಯ ವ್ಯಾಖ್ಯಾನವನ್ನೇ ಸ್ವಲ್ಪ ಮಟ್ಟಿಗೆ ವಕ್ರಗೊಳಿಸಲು ಯತ್ನಿಸಿದೆ. ಆಧುನಿಕತೆಯೆಂದರೆ ಶೌಚಾಲಯವನ್ನು ಹೊಂದುವುದು ಎಂದು ಅದು ಹೇಳಲು ಹೊರಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News