ಬಕ್ರೀದ್ ಹಬ್ಬದಿಂದ ನಾಡು ಒಳಿತನ್ನು ಕಾಣಲಿ: ರಶೀದ್ ಹಾಜಿ

Update: 2016-09-12 11:34 GMT

ಉಳ್ಳಾಲ, ಸೆ.12: ಬಕ್ರೀದ್ ಹಬ್ಬವು ನಾಡಿನ ಸಮಸ್ತ ಜನರನ್ನು ಶಾಂತಿ, ಸಹಬಾಳ್ವೆಯಿಂದ ಜೀವಿಸುವಂತೆ ಮಾಡಿ ಎಲ್ಲರಿಗೂ ಒಳಿತನ್ನು ಮಾಡುವ ಹಬ್ಬವಾಗಲಿ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಹೇಳಿದ್ದಾರೆ.

ಉಳ್ಳಾಲ ದರ್ಗಾದಲ್ಲಿ ಸೋಮವಾರ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮತ್ತು ಆಹಾರ ಸಚಿವ ಯು.ಟಿ ಖಾದರ್ ಭಾಗವಹಿಸಿದರು. ಈ ವೇಳೆ ಕೋಟೆಪುರ ಮಸೀದಿಯಿಂದ ಆಗಮಿಸಿದ ಈದ್ ಮೆರವಣಿಗೆಯನ್ನು ಅಧ್ಯಕ್ಷರು ದರ್ಗಾಕ್ಕೆ ಬರಮಾಡಿಕೊಂಡರು.

ಈ ಸಂದರ್ಭ ಮಾತನಾಡಿದ ರಶೀದ್ ಹಾಜಿ, ಈದ್ ಹಬ್ಬದ ಸಂದೇಶವನ್ನು ನಾಡಿನೆಲ್ಲೆಡೆ ಪಸರಿಸಬೇಕು.ಕೇವಲ ಮುಸಲ್ಮಾನರಲ್ಲದೆ ನಾಡಿನ ಎಲ್ಲಾ ಜನರು ಶಾಂತಿ ಸಹಬಾಳ್ವೆ ನಡೆಸಲು ಈ ಹಬ್ಬವು ಕೊಂಡಿಯಾಗಬೇಕು. ಎಲ್ಲಾ ಜಾತಿ, ಮತದವರು ಪರಸ್ಪರ ಒಟ್ಟು ಸೇರಿ ಸಾಮರಸ್ಯ ಮತ್ತು ನಾಡಿಗೆ ಒಳಿತಾಗುವ ಕಾರ್ಯಕ್ರಮಗಳನ್ನು ನಡೆಸೋಣ ಎಂದು ಹೇಳಿದರು.

ಸಚಿವ ಯು.ಟಿ. ಖಾದರ್ ಮಾತನಾಡಿ, ಸಮಾಜದಲ್ಲಿ ನಾವು ಶಾಂತಿ, ನೆಮ್ಮದಿಯಿಂದ ಬದುಕುವುದರ ಜೊತೆಗೆ ಇತರರನ್ನೂ ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ನಿರ್ಮಿಸಿ ಕೊಡೋಣ. ಇದುವೇ ನಮ್ಮ ಪವಿತ್ರ ಹಬ್ಬಗಳ ಸಂದೇಶವೂ ಆಗಿದೆ ಎಂದು ಹೇಳಿದರು.

ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೇನ್ ಕುಂಞಿ ಮೋನು, ಮಾಜಿ ಪುರಸಭಾಧ್ಯಕ್ಷ ಬಾಝಿಲ್ ಡಿಸೋಜ, ನಗರಸಬಾ ಸದಸ್ಯ ಮುಸ್ತಫಾ ಅಬ್ದುಲ್ಲಾ, ಅಶ್ರಫ್ ಕೋಡಿ, ಮುಹಮ್ಮದ್ ಮುಕ್ಕಚ್ಚೇರಿ, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ಲೆಕ್ಕಪರಿಶೋಧಕ ಯು.ಟಿ. ಇಲ್ಯಾಸ್ ತೋಟ, ಕೋಶಾಧಿಕಾರಿ ಯು.ಕೆ. ಇಲ್ಯಾಸ್ ಬಸ್ತಿಪಡ್ಪು, ಜೊತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸದಸ್ಯರಾದ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲಾ, ಮುಹಮ್ಮದ್ ಹಾಜಿ, ಮುಸ್ತಫಾ ಮಂಚಿಲ, ಯು.ಕೆ. ಮುಹಮ್ಮದ್ ಮುಸ್ತಫಾ, ಆಲಿ ಮೋನು,ಅಬೂಬಕರ್ ಅಲಿನಗರ, ಮಯ್ಯದ್ದಿ ಕೋಡಿ, ಮೊಯ್ದಿನಬ್ಬ ಉಳ್ಳಾಲಬೈಲು, ಇಬ್ರಾಹೀಂ ಹಾಜಿ ಉಳ್ಳಾಲಬೈಲು, ಹಮೀದ್ ಕೋಡಿ, ದರ್ಗಾ ಕಾರ್ಯ ನಿರ್ವಹಣಾಧಿಕಾರಿ ಸೈಯದ್ ಶಿಹಾಬ್, ಶಾಲಾ ಕಾಲೇಜು ಆಡಳಿತಾಧಿಕಾರಿ ಹಾಜಿ ಅಬ್ದುಲ್ಲತೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News