ಹೆಲ್ಪ್ ಇಂಡಿಯಾ ಫೌಂಡೇಶನ್‌ನಿಂದ ವಿಭಿನ್ನವಾಗಿ ಬಕ್ರೀದ್ ಆಚರಣೆ

Update: 2016-09-12 12:12 GMT

ಉಳ್ಳಾಲ, ಸೆ.12: ತೊಕೊಟ್ಟಿನ ಸಾಮಾಜಿಕ ಸಂಘಟನೆ ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸದಸ್ಯರು ತ್ಯಾಗ ಬಲಿದಾನದ ಸಂಕೇತದ ಹಬ್ಬವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಮಾನಸಿಕ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನಸಿಕ ವಿಕಲಚೇತನರೊಂದಿಗೆ ಆಚರಿಸಿದರು.

ಸೋಮವಾರ ಮಧ್ಯಾಹ್ನದ ವೇಳೆ ಆಸ್ಪತ್ರೆಗೆ ತೆರಳಿದ ಹೆಲ್ಪ್ ಇಂಡಿಯಾ ಸದಸ್ಯರು ಸಚಿವ ಯು.ಟಿ. ಖಾದರ್, ಜಿಲ್ಲಾ ಪಂಚಾಯತ್ ಮಾಜಿ ಉಪಾದ್ಯಕ್ಷ ಸತೀಶ್ ಕುಂಪಲ ಅವರ ಸಮಕ್ಷಮದಲ್ಲಿ ಮಾನಸಿಕ ವಿಕಲಚೇತನರೊಂದಿಗೆ ಭೋಜನ ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಹೆಲ್ಪ್ ಇಂಡಿಯಾದ ಸದಸ್ಯರು ಪ್ರತೀ ಈದ್ ಹಬ್ಬಕ್ಕೂ ಧರ್ಮ ಮತ್ತು ಧರ್ಮಗುರುಗಳು ತೋರಿಸಿದ ದಾರಿಯಲ್ಲೇ ಸರಿಯಾದ ಹೆಜ್ಜೆಯನ್ನೇ ಇಡುತ್ತಿದ್ದು, ಅರ್ಥಪೂರ್ಣ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಯಾವುದೇ ಜಾತಿ,ಧರ್ಮದ ಆಚರಣೆಯಲ್ಲಿ ವ್ಯತ್ಯಾಸವಾಗಬಾರದು. ಎಲ್ಲಾ ಧರ್ಮಗುರುಗಳು ಕೊಟ್ಟ ಸಂದೇಶಗಳು ಒಂದೇ ಆಗಿದ್ದು ಹಿರಿಯರು ನಮಗೆ ನೀಡಿದ್ದ ಸಂದೇಶಗಳನ್ನು ಅನುಷ್ಠಾನಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ದೇಹ ಎಷ್ಟು ಸದೃಢವಾಗಿದ್ದರೂ ಕೂಡಾ ನಾವು ಮಾನಸಿಕವಾಗಿಯೂ ಅಷ್ಟೇ ಆರೋಗ್ಯವಂತರಾಗಿರಬೇಕು.ಆ ನಿಟ್ಟಿನಲ್ಲಿ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರು ಆದಷ್ಟು ಬೇಗನೆ ಗುಣಮುಖರಾಗಿ ಸಮಾಜದ ಮುಖ್ಯವಾಹಿನಿಯ ಕಡೆ ಬರುವಂತೆ ಆಶಿಸಿದರು.

ಸಚಿವ ಯು.ಟಿ. ಖಾದರ್ ಮಾತನಾಡಿ, ಹಬ್ಬಗಳು ಕೇವಲ ಹೊರ ಪ್ರಪಂಚದವರಿಗೆ ಮಾತ್ರ ಸಿಮಿತವಾಗಿರದೆ, ದುರ್ದೈವದಿಂದ ಮಾನಸಿಕ ಖಿನ್ನತೆಗೊಳಗಾಗಿ ನಾಲ್ಕು ಗೋಡೆಯೊಳಗೆ ದಿನ ಕಳೆಯುತ್ತಿರುವವರೊಂದಿಗೆ ಬಕ್ರೀದ್ ಆಚರಿಸುತ್ತಿರುವ ಹೆಲ್ಫ್ ಇಂಡಿಯಾದ ಸದಸ್ಯರ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸುಪರಿಟೆಂಡೆಂಟ್ ಡಾ.ಮೇಜರ್ ಶಿವಕುಮಾರ್ ಹಿರೇಮಠ್, ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಸತೀಶ್ ರಾವ್, ಮನೋರೋಗ ವಿಭಾಗದ ಡಾ.ಶ್ರೀನಿವಾಸ್ ಭಟ್, ಉಳ್ಳಾಲ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಬಿ.ಎ., ಉದ್ಯಮಿ ಆಸಿಫ್ ಅಮಾಕೊ, ಸಾಮಾಜಿಕ ಕಾರ್ಯಕರ್ತ ರೋಹಿತ್ ಉಳ್ಳಾಲ್, ಕಾಂಗ್ರೆಸ್ ಮುಖಂಡ ದಿನೇಶ್ ಕುಂಪಲ, ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News