ಮರಳು ಬಿಕ್ಕಟ್ಟು: ಸೆ.26ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಎಚ್ಚರಿಕೆ

Update: 2016-09-12 14:11 GMT

ಉಡುಪಿ, ಸೆ.12: ಮರಳಿನ ತೀವ್ರ ಅಭಾವದಿಂದ ಉಡುಪಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ. ದಿನಗೂಲಿ ಮೇಲೆ ಅವಲಂಬಿತವಾಗಿರುವ ಕಟ್ಟಡ ಕಾರ್ಮಿಕರು ಉಪವಾಸ ಬೀಳುವಂತಾಗಿದೆ. ಇದಲ್ಲದೆ ಗುತ್ತಿಗೆದಾರರು, ಟೆಂಪೋ-ಲಾರಿ ಕಾರ್ಮಿಕರು ಮತ್ತು ಮಾಲಕರು, ಮರಳು ತೆಗೆಯುವ ಕಾರ್ಮಿಕರು, ಕಟ್ಟಡ ಸಾಮಗ್ರಿ ವ್ಯಾಪಾರಸ್ಥರು, ಬಿಲ್ಡರ್‌ಗಳು ಹಾಗೂ ಬಡ ಮಧ್ಯಮ ವರ್ಗದ ಕಟ್ಟಡ ಮಾಲಕರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಮರಳಿನ ಅಭಾವದಿಂದ ಜಿಲ್ಲೆಯ ದೊಡ್ಡ ವಿಭಾಗ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಇದರಿಂದ ಜಿಲ್ಲೆಯ ವ್ಯಾಪಾರ, ವಹಿವಾಟು ಕುಂಠಿತಗೊಂಡಿದೆ. ಈ ಬಗ್ಗೆ ಹಲವು ಬಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಗಮನ ಸೆಳೆದು, ಮನವಿ, ಹೇಳಿಕೆಗಳನ್ನು ನೀಡಿದ ಬಳಿಕವೂ ಸರಕಾರ ಎಚ್ಚೆತ್ತು ಕೊಳ್ಳದ ಹಿನ್ನೆಲೆಯಲ್ಲಿ ಇದೀಗ ಪ್ರತಿಭಟನೆಗೆ ಇಳಿಯಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರೆ, ಉಸ್ತುವಾರಿ ಸಚಿವರು ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ರಾಜ್ಯ ಸರಕಾರ ರೂಪಿಸುತ್ತಿದೆ ಎನ್ನುತ್ತಾರೆ. ಆದರೆ ಮರಳಿನ ಅಭಾವದ ತೀವ್ರತೆಯ ಬಗ್ಗೆ ಉಸ್ತುವಾರಿ ಸಚಿವರಾಗಲೀ, ರಾಜ್ಯ ಸರಕಾರಕ್ಕಾಗಲೀ ಕಾಳಜಿ ಇರುವಂತೆ ಕಂಡುಬರುತ್ತಿಲ್ಲ ಎಂದವರು ತಿಳಿಸಿದ್ದಾರೆ. ನಾಳೆ ಚೆನ್ನೈ ಹಸಿರು ಪೀಠದ ಮುಂದೆ ಸಿಆರ್‌ಝಡ್ ವ್ಯಾಪ್ತಿಯ ತಡೆಯಾಜ್ಞೆ ವಿಚಾರಣೆಗೆ ಬರಲಿದೆ. ರಾಜ್ಯ ಹೈಕೋರ್ಟಿನಲ್ಲೂ ಮೊಕದ್ದಮೆ ಇದ್ದು, ಅದನ್ನು ತೆರವುಗೊಳಿಸಲು ಸರಕಾರ ಪ್ರಯತ್ನಿಸುತ್ತಿಲ್ಲ.

ಈ ಎಲ್ಲಾ ಹಿನ್ನೆಲೆಯಲ್ಲಿ ಸೆ.26ರ ಸೋಮವಾರದಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲು ಸಿಐಟಿಯುಗೆ ಸೇರಿದ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ನಿರ್ಧರಿಸಿದ್ದು ಇದಕ್ಕೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಬೆಂಬಲ ನೀಡಬೇಕೆಂದು ಅಧ್ಯಕ್ಷ ಶೇಖರ ಬಂಗೇರ, ಕಾರ್ಯದರ್ಶಿ ವಿಠಲ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News