×
Ad

ಆಕ್ಟಿವಾಗೆ ಸೈಡ್ ಕೊಡಲಿಲ್ಲ ಎಂದು ಬಸ್ ಅಡ್ಡಗಟ್ಟಿ ಸಿಬ್ಬಂದಿಗೆ ಹಲ್ಲೆ

Update: 2016-09-12 23:03 IST

ಮಂಗಳೂರು, ಸೆ.12: ಆಕ್ಟಿವಾಗೆ ಸೈಡ್ ಕೊಡಲಿಲ್ಲ ಎಂದು ಆರೋಪಿಸಿ ಮೂವರು ಯುವಕರು ಬಸ್‌ನ್ನು ಅಡ್ಡಗಟ್ಟಿ ಅದರ ಚಾಲಕ ಹಾಗೂ ನಿರ್ವಾಹಕನಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ ಘಟನೆ ನಗರದ ಪಡೀಲ್ ಬಳಿ ಸಂಭವಿಸಿದೆ.

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ನಗರದ ಸ್ಟೇಟ್‌ಬ್ಯಾಂಕ್‌ನಿಂದ ಉಜಿರೆಯತ್ತ ಸಾಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಂಗಳೂರಿನಿಂದ ಪಡೀಲ್‌ನತ್ತ ಹೋಂಡಾ ಆ್ಯಕ್ಟಿವಾದಲ್ಲಿ ಮಂಗಳೂರಿನ ಮೋಹನ್‌ರಾಜ್, ಪ್ರಾಣೇಶ್ ಹಾಗೂ ನೀಕ್ಷಿತ್ ಸಂಚರಿಸುತ್ತಿದ್ದರು. ಈ ಸಂದರ್ಭ ಇವರಿಗೆ ಬಸ್ ಚಾಲಕ ಸೈಡ್ ನೀಡಿಲ್ಲ ಎಂದು ಪಡೀಲ್ ಬಳಿ ಬಸ್‌ನ್ನು ತಡೆದಿದ್ದಾರೆ. ನಂತರ ಬಸ್‌ನೊಳಗೆ ಪ್ರವೇಶಿಸಿ ಚಾಲಕ ಚೆನ್ನರಾಯಪಟ್ಟಣದ ಕುಪ್ಪೂರಲಿಂಗ ಅವರಿಗೆ ಅವಾಚ್ಯವಾಗಿ ಬೈದು, ಬಟ್ಟೆ ಎಳೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಬಸ್ ನಿರ್ವಾಹಕ ಬಸವರಾಜು ಅವರಿಗೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಬಸ್‌ನ ಸೈಡ್ ಮಿರರ್ ಒಡೆದು ಹಾಕಿದ್ದಾರೆ. ಈ ಘಟನೆಯನ್ನು ಕಂಡು ಹಿಂದಿನಿಂದ ಬರುತ್ತಿದ್ದ ಬಸ್‌ನ ಚಾಲಕ ಹರೀಶ್ ಹಾಗೂ ನಿರ್ವಾಹಕ ತಿಮ್ಮಣ್ಣ ಗೌಡ ಸ್ಥಳಕ್ಕೆ ಬಂದಾಗ ಅವರಿಗೂ ಈ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೂವರ ಪೈಕಿ ಮೋಹನ್‌ರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣ ಕುರಿತು ತನಿಖೆ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News