ಸೆ. 17 ರಿಂದ ಸಿಐಟಿಯು 13ನೆ ಕರ್ನಾಟಕ ರಾಜ್ಯ ಸಮ್ಮೇಳನ
ಮಂಗಳೂರು,ಸೆ.12:ಸಾಮಾಜಿಕ ಭದ್ರತೆಗಾಗಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ದುಡಿಯುವ ಜನರ ವಿಮೋಚನೆಗಾಗಿ ಎಂಬ ಧ್ಯೇಯವಾಕ್ಯದೊಂದಿಗೆ ಸಿಐಟಿಯುವಿನ 13ನೇ ಕರ್ನಾಟಕ ರಾಜ್ಯ ಸಮ್ಮೇಳನವು ಸೆ.17, 18, 19ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಜರುಗಲಿದೆ ಎಂದು ಸಿಐಟಿಯು ಪ್ರಕಟಣೆ ತಿಳಿಸಿದೆ.
ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳಿಂದ ತೀವ್ರವಾಗಿ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕ ವರ್ಗವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲವಾದ ಕಾರ್ಮಿಕ ಚಳುವಳಿಯನ್ನು ಕಟ್ಟಿ ಬೆಳೆಸುವ ಮೂಲಕ ಸರಕಾರಗಳ ವಿರುದ್ಧ ಸಮರಧೀರ ಹೋರಾಟ ನಡೆಸಲು ಸಜ್ಜಾಗಬೇಕಾಗಿದೆ. ಬೆಲೆಯೇರಿಕೆ, ಕಾರ್ಮಿಕ ಕಾನೂನುಗಳು,ಸ ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿರುವ ಸಮ್ಮೇಳನವು ಹಲವಾರು ನಿರ್ಣಯಗಳನ್ನು ಕೈಗೊಳ್ಳಲಿದೆ. ಇಡೀ ರಾಜ್ಯದಲ್ಲಿ 3 ಲಕ್ಷದಷ್ಟು ವಿವಿಧ ಭಾಗದ ಕಾರ್ಮಿಕರ ಸದಸ್ಯತ್ವ ಹೊಂದಿದ್ದು, ಸಮ್ಮೇಳನದಲ್ಲಿ ಆಯ್ದ 400 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದ.ಕ ಜಿಲ್ಲೆಯಿಂದ 60 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದು, ದ.ಕ ಜಿಲ್ಲೆಯ ಕಾರ್ಮಿಕ ವರ್ಗದ ಸಮಸ್ಯೆಗಳಿಗೂ ಕೂಡ ಬೆಳಕು ಚೆಲ್ಲಲಿದೆ ಎಂದು ಸಿಐಟಿಯು ತಿಳಿಸಿದೆ.
ಸೆ.17ರಂದು ಕಾರ್ಮಿಕರ ಆಕರ್ಷಕ ಮೆರವಣಿಗೆ ಹಾಗೂ ಬಹಿರಂಗ ಸಭೆಯು ನಡೆಯಲಿದ್ದು, ಸೆ. 18-19ರಂದು ಪ್ರತಿನಿಧಿ ಅಧಿವೇಶನ ನಡೆಯಲಿದೆ. 3 ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್‌ಸೆನ್ ಹಾಗೂ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಡಾ ಕೆ. ಹೇಮಲತಾರವರು ಭಾಗವಹಿಸಿ ಸೂಕತಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಿಐಟಿಯು ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ರವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.