ಕಪಿಲ್ ಶರ್ಮಾಗೆ ಜೈಲಾಗುವ ಸಾಧ್ಯತೆ
ಮುಂಬೈ, ಸೆ.13: ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಯೊಬ್ಬರ ವಿರುದ್ಧ ಲಂಚ ಆರೋಪವನ್ನು ನೇರವಾಗಿ ಪ್ರಧಾನಿಗೆ ಟ್ವೀಟ್ ಮಾಡಿದ ಹಾಸ್ಯನಟ ಕಪಿಲ್ ಶರ್ಮಾಗೆ ಇದೀಗ ಅದಕ್ಕೆ ಬೆಲೆ ತೆತ್ತಿದ್ದಾರೆ. ಗೋರೆಗಾಂವ್‌ನಲ್ಲಿರುವ ಡಿಎಲ್‌ಎಚ್ ಎನ್‌ಕ್ಲೇವ್‌ನ 9ನೆ ಮಹಡಿಯಲ್ಲಿರುವ ಶರ್ಮಾ ಅವರ ಫ್ಲಾಟ್‌ಗೆ ಸಂಬಂಧಿಸಿದಂತೆ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಇರ್ಫಾನ್ ಖಾನ್ ಹಾಗೂ ಇತರ ಮೂವರು ಫ್ಲಾಟ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪಿ-ಸೌತ್ ವಾರ್ಡ್‌ನ ಉಪ ಇಂಜಿನಿಯರ್ ಅಭಯ್ ಜಗ್‌ತಾಪ್ ಐದು ಮಂದಿ ಫ್ಲ್ಯಾಟ್ ಮಾಲಕರು ಹಾಗೂ ಬಿಲ್ಡರ್ ವಿರುದ್ಧ ಮಹಾರಾಷ್ಟ್ರ ಪ್ರಾದೇಶಿಕ ನಗರ ಯೋಜನಾ ಕಾಯ್ದೆ (ಎಂಆರ್‌ಟಿಪಿ)- 1966ನ ಸೆಕ್ಷನ್ 53 (7) ಅನ್ವಯ ಎಫ್‌ಐಆರ್ ದಾಖಲಿಸಿದ್ದಾರೆ. ಅನಧಿಕೃತ ನಿರ್ಮಾಣದ ವಿರುದ್ಧ ನೀಡಿರುವ ನೋಟಿಸ್‌ಗೆ ಬದ್ಧರಾಗದ ಫ್ಲ್ಯಾಟ್ ಮಾಲಕರನ್ನು ವಿಚಾರಣೆಗೆ ಗುರಿಪಡಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ ಇದಾಗಿದೆ. ಈ ಸೆಕ್ಷನ್‌ನಡಿ ಅಪರಾಧ ಸಾಬೀತಾದರೆ ಒಂದು ತಿಂಗಳಿಗಿಂದ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ 2000 ರೂಪಾಯಿಗಳಿಂದ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.
ಗೋರೆಗಾಂವ್ ಹೈರೈಸ್‌ನ 15 ಫ್ಲಾಟ್‌ಗಳಲ್ಲಿ ಗಂಭೀರವಾಗಿ ನಿಯಮ ಉಲ್ಲಂಘಿಸಿರುವುದನ್ನು ಬಿಎಂಸಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಶರ್ಮಾ ಅವರ ಫ್ಲಾಟ್ ಇರುವ 9ನೆ ಮಹಡಿಯಲ್ಲಿ ನಿಯಮ ಉಲ್ಲಂಘನೆಯಾಗಿರುವುದೂ ಪತ್ತೆಯಾಗಿದೆ. ಎತ್ತರದ ಲಕ್ಷಣ, ಖಾಲಿ ಜಾಗ, ಕೊಳವೆ ಅಳವಡಿಕೆ, ಸಾಮಾನ್ಯ ಪ್ಯಾಸೇಜ್ ಹಾಗೂ ಪಾರ್ಕಿಂಗ್ ಪೋಡಿಯಂ ಭಾಗವನ್ನು ಭಾಗಶಃ ಅನಧಿಕೃತವಾಗಿ ಮುಖ್ಯಕಟ್ಟಡದಲ್ಲಿ ಸೇರಿಸಿಕೊಂಡಿರುವುದು ಪತ್ತೆಯಾಗಿದೆ. ಪೀಕು ಖ್ಯಾತಿಯ ನಟ ಇರ್ಫಾನ್ ಖಾನ್ ಐದನೆ ಮಹಡಿಯಲ್ಲಿ ಫ್ಯಾಟ್ ಹೊಂದಿದ್ದಾರೆ.
ನವೆಂಬರ್ 2013ರಲ್ಲಿ ಸ್ವಾಧೀನ ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಈ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಎಫ್‌ಐಆರ್ ದಾಖಲಿಸಲು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಜುಲೈ 12ರಂದು ಓಶಿವರ ಪೊಲೀಸರು ಬಿಎಂಸಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆಗಸ್ಟ್ 24ರಂದು ಇದನ್ನು ಸಲ್ಲಿಸಿದ್ದು, ಸೆಪ್ಟೆಂಬರ್ 9ರಂದು ಎಫ್‌ಐಆರ್ ದಾಖಲಿಸಲಾಗಿದೆ.