×
Ad

ಹಿಂಸಾತ್ಮಕ ಪ್ರತಿಭಟನೆ: ಕರ್ನಾಟಕ ಸರಕಾರ, ಪ್ರತಿಭಟನಾಕಾರರಿಗೆ ಸುಪ್ರೀಂಕೋಟ್ ತರಾಟೆ

Update: 2016-09-13 08:55 IST

ಹೊಸದಿಲ್ಲಿ, ಸೆ.13: ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ನೀಡಿದ ತೀರ್ಪಿನ ವಿರುದ್ಧ ಕರ್ನಾಟಕದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಬಗ್ಗೆ ಪ್ರತಿಭಟನಾಕಾರರು ಹಾಗೂ ಕರ್ನಾಟಕ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರೌಡಿಸಂಗೆ ಮಣಿದ ಬಗ್ಗೆ ಹಾಗೂ ಆದೇಶದ ಪರಾಮರ್ಶೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಛೀಮಾರಿ ಹಾಕಿದೆ. ಸೋಮವಾರ ಕೋರ್ಟ್‌ಗೆ ರಜೆ ಇದ್ದರೂ ವಿಶೇಷ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು.ಯು.ಲಲಿತ್ ಅವರು 15 ಸಾವಿರ ಕ್ಯೂಸೆಕ್ ಬದಲಾಗಿ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದರು.

ಇದಕ್ಕೂ ಮುನ್ನ ಪ್ರತಿಭಟನೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿ, ಸಿದ್ದರಾಮಯ್ಯ ಸರಕಾರ ರವಿವಾರ ಸುಪ್ರೀಂಕೋರ್ಟ್‌ಗೆ ತೀರ್ಪು ಪರಾಮರ್ಶೆ ಅರ್ಜಿ ಸಲ್ಲಿಸಿದ ಕ್ರಮಕ್ಕೆ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿತು.

ಕರ್ನಾಟಕ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರು, ಸೆಪ್ಟೆಂಬರ್ 5ರ ತೀರ್ಪು ತಪ್ಪಾಗಿದೆ ಎಂಬ ವಾದವನ್ನು ತಕ್ಷಣ ಕೈಬಿಟ್ಟರು. ಕಾವೇರಿ ನದಿಪಾತ್ರದ ಬೆಂಗಳೂರು, ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತ ಚಳವಳಿ ಆರಂಭವಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ನೂರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂದು ವಿವರಿಸಿ, ವಿಷಾದ ವ್ಯಕ್ತಪಡಿಸಿದರು.ಇದನ್ನು ನ್ಯಾಯಪೀಠ ಒಪ್ಪಿಕೊಂಡಿತು. ಇದಕ್ಕೆ ಸರಕಾರವನ್ನು ಟೀಕಿಸಿದ ನ್ಯಾಯಪೀಠ, ಕಾನೂನು- ಸುವ್ಯವಸ್ಥೆ ಕಾಪಾಡುವುದು ಅದರ ಜವಾಬ್ದಾರಿ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News