ಪರಿಚಿತನೇ ಅಪಹರಿಸಿ, ಎರಡೆರಡು ಬಾರಿ ಮಾರಿದ ಮಗು ಕೊನೆಗೂ ಹೆತ್ತವರ ಕೈಸೇರಿತು !

Update: 2016-09-13 03:28 GMT

ಗಾಜಿಯಾಬಾದ್, ಸೆ.13: ಎರಡು ಬಾರಿ ಪರಿಚಿತರಿಂದಲೇ ಕದಿಯಲ್ಪಟ್ಟು ಮಾರಾಟವಾಗಿದ್ದ 13 ತಿಂಗಳ "ಯಶ್" ಎಂಬ ಗಂಡುಮಗು ಕೊನೆಗೂ ಸುರಕ್ಷಿತವಾಗಿ ಪೋಷಕರ ಕೈ ಸೇರಿದ ಘಟನೆ ವರದಿಯಾಗಿದೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ದಿಲ್ಲಿಯ ಲಕ್ಷ್ಮೀನಗರದ ಬೇಕರಿ ಮಾಲಕ ಹಾಗೂ ಪತ್ನಿಯ ವಶದಲ್ಲಿದ್ದ ಮಗು ಸುರಕ್ಷಿತವಾಗಿ ಸೇರಿದೆ.

ಇಲ್ಲಿ ಪ್ರಾಥಮಿಕವಾಗಿ ಕಾರ್ಯಾಚರಣೆಗೆ ಕಾಲುವೆಯಾದದ್ದು ಅನಿತಾ ವಿಜ್ ಎಂಬ ವೈದ್ಯೆ. ಮಕ್ಕಳನ್ನು ಕದಿಯುವ ಗ್ಯಾಂಗ್‌ನಿಂದ ಮಗುವನ್ನು 70 ಸಾವಿರ ರೂಪಾಯಿಗೆ ಖರೀದಿಸಿದ ವಿಜ್, ಮಕ್ಕಳಿಲ್ಲದ ದಿಲ್ಲಿ ದಂಪತಿಗೆ ಅದನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನಿತಾ ವಿಜ್ ಎಂಬ ವೈದ್ಯೆಯನ್ನು ಆಕೆಯ ಪ್ರತಾಪ್‌ನಗರ ಫ್ಲಾಟ್‌ನಿಂದ ರವಿವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿದ ಬಳಿಕ ಪೊಲೀಸ್ ಕಾರ್ಯಾಚರಣೆ ಫಲ ನೀಡಲಾರಂಭಿಸಿತ್ತು. ವಿಜ್ ವಿಚಾರಣೆ ವೇಳೆ ಮಗುವನ್ನು ಮಾರಾಟ ಮಾಡಿದ್ದನ್ನು ಬಾಯ್ಬಿಟ್ಟರು, ಪೊಲೀಸರು ಬೇಕರಿ ಮಾಲಕ ಪಾರಸ್ ಜೈನ್ ಹಾಗೂ ಪತ್ನಿ ಅರ್ಚನಾ ಅವರ ಮನೆಗೆ ತೆರಳಿ ಮಗುವನ್ನು ವಶಕ್ಕೆ ಪಡೆದರು. ವಿಜ್ ಈ ದಂಪತಿಗೆ ಮಕ್ಕಳಾಗದಿರುವ ಸಮಸ್ಯೆ ಬಗ್ಗೆ ಸಲಹಾ ಚಿಕಿತ್ಸೆ ನೀಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ವಿಜ್ ಈ ಮಗುವನ್ನು ಚಂದವೀರ್ ಎಂಬ ಟ್ಯಾಕ್ಸಿ ಚಾಲಕ ಹಾಗೂ ಆತನ ಪತ್ನಿ ಪೂನಮ್ ಎಂಬವರಿಂದ ಸೆಪ್ಟೆಂಬರ್ 10ರಂದು ಸಂಜೆ ಖರೀದಿಸಿದ್ದರು. ಈ ದಂಪತಿ ಸುನಿಲ್ ಎಂಬಾತನಿಂದ ಮಗುವನ್ನು ಖರೀದಿಸಿದ್ದರು. ಈ ವ್ಯಕ್ತಿ ಮಗುವಿನ ಪೋಷಕರಿಗೆ ಪರಿಚಿತನಾಗಿದ್ದು, ಮಗು ಮನೆಯಲ್ಲಿ ನಿದ್ದೆ ಮಾಡುತ್ತಿದ್ದಾಗ ಅಪಹರಿಸಿದ್ದ.

ಇದೇ ವೇಳೆ ಪೋಷಕರಾದ ಸಚಿನ್ ಹಾಗೂ ಪೂಜಾ ಗಾಜಿಯಾಬಾದ್ ನಗರ ಠಾಣೆಗೆ ಬಂದು ಮಗು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಸಚಿನ್ ಹೊರಗಿದ್ದಾಗ ಹಾಗೂ ಪೂಜಾ ನೀರು ತರಲು ಪಕ್ಕದ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News