ಸ್ವಚ್ಛತೆ : ಉಡುಪಿ ಜಿಲ್ಲೆಗೆ ದೇಶದಲ್ಲೇ 7 ನೇ ಸ್ಥಾನ
ಉಡುಪಿ,ಸೆ.13 : ದೇಶದ ಟಾಪ್ ಟೆನ್ ಸ್ವಚ್ಛ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಏಳನೇ ಸ್ಥಾನ ಪಡೆದುಕೊಂಡಿದೆ. ದೇಶದ ಒಟ್ಟು 600 ಜಿಲ್ಲೆಗಳಲ್ಲಿ 75 ಜಿಲ್ಲೆಗಳನ್ನು ಕೇಂದ್ರ ಸರಕಾರವು ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಝೇಶನ್ ನಡೆಸಿದ ಈ ಸಮೀಕ್ಷೆಗೆ ಆಯ್ದುಕೊಂಡಿತ್ತು.ಜಿಲ್ಲೆಗಳಲ್ಲಿ ಲಭ್ಯವಿರುವ ಹಾಗೂ ಬಳಸಲಾಗುತ್ತಿರುವ ಶೌಚಾಲಯಗಳು, ತ್ಯಾಜ್ಯ ವಿಲೇವಾರಿ,ಮನೆಗಳ ಸುತ್ತಮುತ್ತ ಕಾಪಾಡಿಕೊಳ್ಳಲಾಗಿರುವ ಸ್ವಚ್ಛತೆಯ ಆಧಾರದಲ್ಲಿ ಅತ್ಯಂತ ಸ್ವಚ್ಛ ಹಾಗೂ ಅತ್ಯಂತ ಕೊಳಕು ಜಿಲ್ಲೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಸಮೀಕ್ಷಾ ವರದಿಯನ್ನು ಇತ್ತೀಚೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಡುಗಡೆಗೊಳಿಸಿದ್ದರು.
ಜಿಲ್ಲೆಗಳನ್ನುಬಯಲು ಹಾಗೂ ಗುಡ್ಡಗಾಡು ಪ್ರದೇಶಗಳೆಂದು ವಿಂಗಡಿಸಿ ಈ ಪಟ್ಟಿ ತಯಾರಿಸಲಾಗಿದೆ.
ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆ ಬಯಲು ಜಿಲ್ಲೆಗಳಲ್ಲಿ ಅತ್ಯಂತ ಸ್ವಚ್ಛ ಜಿಲ್ಲೆಯೆಂದು ಟಾಪ್ ಒನ್ ಸ್ಥಾನ ಪಡೆದುಕೊಂಡಿದ್ದರೆ ನಂತರದ ಸ್ಥಾನಗಳು ಸತಾರ, ಕೊಲ್ಹಾಪುರ, ರತ್ನಗಿರಿ ಹಾಗೂ ಥಾಣೆ ಜಿಲ್ಲೆಗಳಿಗೆ ಹೋಗಿವೆ. ಇವುಗಳ ಹೊರತಾಗಿ ನಾಡಿಯಾ, ಮಿಡ್ನಾಪುರ (ಪೂರ್ವ), ಪಶ್ಚಿಮ ಬಂಗಾಳದ ಹೂಗ್ಲಿ, ಕರ್ನಾಟಕದಿಂದ ಉಡುಪಿ ಜಿಲ್ಲೆ ಹಾಗೂ ರಾಜಸ್ಥಾನದ ಚುರು ಜಿಲ್ಲೆ ಮೊದಲ ಹತ್ತು ಸ್ವಚ್ಛ ಜಿಲ್ಲೆಗಳ ಪಟ್ಟಿಯಲ್ಲಿವೆ.
ಗುಡ್ಡಗಾಡು ಜಿಲ್ಲೆಗಳಲ್ಲಿ ಹಿಮಾಚಲಪ್ರದೇಶದ ಮಂಡಿ ಜಿಲ್ಲೆ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಕೊಳಕು ಜಿಲ್ಲೆಗಳ ಪಟ್ಟಿಯಲ್ಲಿ ರಾಜಸ್ಥಾನದ ಬಿಕಾನೇರ್ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.ಸಮೀಕ್ಷೆ ನಡೆಸಲಾದ ಜಿಲ್ಲೆಗಳಲ್ಲಿ 75 ನೇ ಸ್ಥಾನ ಪಡೆದ ಕರ್ನಾಟಕದ ಗದಗ್ ಜಿಲ್ಲೆ ಕೊಳಕು ಜಿಲ್ಲೆಗಳಲ್ಲೊಂದೆಣಿಸಿಕೊಂಡಿದೆ. ಗದಗ್ ಜಿಲ್ಲೆಯು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್ ಅವರ ತವರು ಜಿಲ್ಲೆಯಾಗಿದೆ.