ಇಸ್ರೇಲ್ ಯುದ್ಧ ವಿಮಾನ, ಡ್ರೋನ್ ಹೊಡೆದುರುಳಿಸಿದೆ: ಸಿರಿಯ ಸೇನೆ
ಡಮಾಸ್ಕಸ್, ಸೆ. 13: ಇಸ್ರೇಲ್ ಗಡಿ ಸಮೀಪದ ಕುನೇಟ್ರದಲ್ಲಿರುವ ಸಿರಿಯ ಸೇನಾ ನೆಲೆಯೊಂದರ ಮೇಲೆ ಇಸ್ರೇಲ್ ದಾಳಿ ನಡೆಸಿದ ಬಳಿಕ, ಆ ದೇಶದ ಒಂದು ಯುದ್ಧ ವಿಮಾನ ಮತ್ತು ಒಂದು ಡ್ರೋನ್‌ನ್ನು ಸಿರಿಯ ಸೇನೆ ಹೊಡೆದುರುಳಿಸಿದೆ ಎಂದು ಸಿರಿಯದ ಸರಕಾರಿ ಮಾಧ್ಯಮ ಮಂಗಳವಾರ ಹೇಳಿದೆ.ಹೇಳಿಕೆ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿರುವ ಇಸ್ರೇಲ್, ತಾನು ಯಾವುದೇ ವಿಮಾನವನ್ನು ಕಳೆದುಕೊಂಡಿಲ್ಲ ಎಂದು ಹೇಳಿದೆ.ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್‌ರ ಸೇನೆಯ ವಿರುದ್ಧ ಹೋರಾಡುತ್ತಿರುವ ಗುಂಪುಗಳಿಗೆ ಬೆಂಬಲ ನೀಡುವುದಕ್ಕಾಗಿ ಇಸ್ರೇಲ್ ವಿಮಾನಗಳು ಗಡಿ ಉಲ್ಲಂಘಟನೆ ನಡೆಸಿವೆ ಎಂದು ‘ಸನ’ ವಾರ್ತಾ ಸಂಸ್ಥೆ ಹೇಳಿದೆ.‘‘ಭಯೋತ್ಪಾದಕ ಗುಂಪುಗಳಿಗೆ ಇಸ್ರೇಲ್ ನೀಡುವ ಬೆಂಬಲ ಮತ್ತು ಕುನೇಟ್ರ ಉಪ ವಿಭಾಗದಲ್ಲಿ ಅವುಗಳು ಅನುಭವಿಸಿದ ದಯನೀಯ ವೈಫಲ್ಯ ಹಾಗೂ ಅಗಾಧ ನಷ್ಟಗಳ ಹಿನ್ನೆಲೆಯಲ್ಲಿ ಅವುಗಳ ಕುಸಿದ ನೈತಿಕ ಸ್ಥೈರ್ಯವನ್ನು ಎತ್ತಿಹಿಡಿಯುವ ಕಾರ್ಯದ ಭಾಗವಾಗಿ ಈ ಗಡಿ ಉಲ್ಲಂಘನೆ ನಡೆದಿದೆ’’ ಎಂದು ಸನ ಹೇಳಿದೆ.ಸಿರಿಯದ ಸರಕಾರಿ ಮಾಧ್ಯಮವು ಹೋರಾಟನಿರತ ಪ್ರತಿಪಕ್ಷಗಳನ್ನು ‘‘ಭಯೋತ್ಪಾದಕರು’’ ಎಂಬುದಾಗಿ ಕರೆಯುತ್ತದೆ.
ನಿರಾಕರಿಸಿದ ಇಸ್ರೇಲ್
ಸಿರಿಯದ ಹೇಳಿಕೆಯನ್ನು ನಿರಾಕರಿಸಿದ ಇಸ್ರೇಲ್ ಸೇನೆ, ತನ್ನ ವಿಮಾನದತ್ತ ಎರಡು ಕ್ಷಿಪಣಿಗಳನ್ನು ಉಡಾಯಿಸಲಾಯಿತಾದರೂ, ಎರಡೂ ಕ್ಷಿಪಣಿಗಳು ತಮ್ಮ ಗುರಿಯನ್ನು ತಪ್ಪಿಸಿಕೊಂಡಿವೆ ಎಂದು ಹೇಳಿದೆ.ಸಿರಿಯವು ಉತ್ತರ ಇಸ್ರೇಲ್‌ನತ್ತ ಕ್ಷಿಪಣಿಯೊಂದನ್ನು ಹಾರಿಸಿರುವುದಕ್ಕೆ ಪ್ರತಿಯಾಗಿ, ಸಿರಿಯನ್ ಗೋಲನ್ ಹೈಟ್ಸ್‌ನಲ್ಲಿರುವ ಸಿರಿಯ ಸರಕಾರದ ಫಿರಂಗಿ ನೆಲೆಗಳನ್ನು ಗುರಿಯಾಗಿಸಿ ತಾನು ಆಕ್ರಮಣ ಮಾಡಿರುವುದಾಗಿ ಇಸ್ರೇಲ್ ಸೇನೆ ಸೋಮವಾರ ಹೇಳಿತ್ತು.