×
Ad

ಕಾವೇರಿ ವಿವಾದ: ದ.ಕ. ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರ ಸಭೆ

Update: 2016-09-13 15:30 IST

ಮಂಗಳೂರು, ಸೆ.13: ಕಾವೇರಿ ಜಲ ವಿವಾದವು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಕೇಂದ್ರ ಸರಕಾರ ನೇತೃತ್ವ ವಹಿಸಿ ಸೂಕ್ತ ನಿರ್ಣಯವನ್ನು ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲೆಯ ವಿವಿಧ ಸಂಘಟನೆಗಳು ನಿರ್ಣಯಿಸಿವೆ.

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ನ್ಯಾಯಯುತ ಪರಿಹಾರಕ್ಕೆ ಬೆಂಬಲ, ಅಹಿಂಸಾತ್ಮಕ ಹೋರಾಟಕ್ಕೆ ಬದ್ಧವಾಗಿರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳ ಪ್ರಮುಖರು ಅಭಿಪ್ರಾಯ ವ್ಯಕ್ಯಪಡಿಸಿದ ಹಿನ್ನೆಲೆಯಲ್ಲಿ, ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಕುರಿತಾದ ಮನವಿಯನ್ನು ಮುಖ್ಯಮಂತ್ರಿ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯ ಆರಂಭದಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಪ್ರಮುಖರು ಬಿಂದಿಗೆ (ಕೊಡಪಾನ)ಗೆ ತಂಬಿಗೆಯಿಂದ ನೀರನ್ನು ಸುರಿಯುವ ಮೂಲಕ ಚಾಲನೆ ನೀಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅಹಿಂಸಾತ್ಮಾಕ ಪ್ರತಿಭಟನೆ ಯಾವುದೇ ರೀತಿಯಲ್ಲಿ ಪರಿಹಾರವಲ್ಲ ಎಂದರು.

ನೀರು, ಗಾಳಿ, ನೆಲ ಎಲ್ಲವೂ ರಾಷ್ಟ್ರೀಯ ಸಂಪತ್ತು. ಕೃಷಿ ಬದುಕು, ವ್ಯಾಪಾರ ವಹಿವಾಟಿಗೆ ಸಂಬಂಧಿಸಿ ಪರಸ್ಪರ ಸಹಕಾರವನ್ನು ಹೊಂದಿರುವ ವಿವಿಧ ರಾಜ್ಯಗಳವರು ತಮ್ಮ ಹಕ್ಕು, ನ್ಯಾಯಕ್ಕಾಗಿ ಹಿಂಸಾಪ್ರವೃತ್ತಿಗಿಳಿಯದೆ, ಗಾಂಧಿ ಮಾರ್ಗದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಈ ರೀತಿ ಭಾವೋದ್ವೇಗಕ್ಕೆ ಒಳಗಾಗಿ ಇಂಹ ಹಿಂಸಾತ್ಮಾಕ ಘಟನೆಗಳಿಗೆ ಅವಕಾಶ ನೀಡುವಂತದ್ದು ಖಂಡನೀಯ ಎಂದರು.

ಬೆಂಗಳೂರಿನಲ್ಲಿ ಸಾರ್ವಜನಿಕರಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದೆ. ಅದನ್ನು ನಿವಾರಿಸಬೇಕಿದೆ. ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿ ವಿಚಾರದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಆತಂಕವಿದೆ. ಈ ಬಗ್ಗೆಯೂ ಸರಕಾರ ಗಮನ ಹರಿಸಬೇಕು. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಅದಕ್ಕಾಗಿ ಹಿಂಸಾಪ್ರವೃತ್ತಿಗೆ ಪ್ರಚೋದನೆ ನಮಗೆ ಭೂಷಣವಲ್ಲ ಎಂದು ಕಲ್ಕೂರ ನುಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ನ್ಯಾಯಾಂಗದಲ್ಲಿ ರಾಜಕೀಯ ಚಿಂತನೆಗೆ ಅವಕಾಶ ಇರಬಾರದು. ಒಂದು ರೀತಿಯಲ್ಲಿ ಈ ಗಲಾಭೆ, ದೊಂಬಿಗಳು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಪಿತೂರಿಯೇ ಎಂಬ ಗುಮಾನಿಯೂ ಕಾಡುತ್ತದೆ. ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆಯಿಂದ ಮಾತ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದವರು ಅಭಿಪ್ರಾಯಿಸಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಮಾತನಾಡಿ, ಇತ್ತೀಚೆಗೆ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಬಂದ್ ನಡೆದ ಸಂದರ್ಭ, ಕಾವೇರಿ ನಮಗೆ ಸಂಬಂಧಪಟ್ಟ ವಿಚಾರವಲ್ಲ. ನೇತ್ರಾವತಿ ಹೋರಾಟಕ್ಕೆ ನಮಗೆ ಬೆಂಬಲ ನೀಡಿಲ್ಲ. ಹಾಗಾಗಿ ನಮ್ಮದು ಬೆಂಬಲ ಇಲ್ಲ ಎಂಬ ಮಾತುಗಳೂ ವ್ಯಕ್ತವಾಗಿದ್ದು ವಿಷಾದನೀಯ. ಈ ರೀತಿ ನಮ್ಮೆಳಗೆ ವಿಭಜನೆಯ ಮಾತುಗಳನ್ನೂ ನಾವು ಖಂಡಿಸುವ ಜತೆಗೆ ರಾಜ್ಯದ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಬೇಕು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿ, ಜೀವಹಾನಿ, ಪ್ರಾಣ ಹಾನಿ ಆಗದ ರೀತಿಯಲ್ಲಿ ಪ್ರತಿಭಟನೆ ಅಗತ್ಯವಾಗಿದೆ ಎಂದರು. ಕೆಸಿಸಿಐ ಅಧ್ಯಕ್ಷ ರಾಮ್ ಮೋಹನ್ ಪೈ ಮಾರೂರು, ಮೀನುಗಾರರ ಮುಖಂಡ ವಾಸುದೇವ ಬೋಳೂರು, ಇಂಟಕ್‌ನ ಮುಖಂಡ ಸದಾಶಿವ ಶೆಟ್ಟಿ ಮೊದಲಾದವರು ಮಾತನಾಡಿದರು.

ಸಭೆಯಲ್ಲಿ ದ.ಕ. ಜಿಲ್ಲಾ ತಮಿಳು ಸಂಘಂ, ಅಹಿಂದ, ಗುಜರಾತಿ ಮಹಾಜನ್ ಅಸೋಸಿಯೇಶನ್, ರಾಜಸ್ತಾನ ವಿಶ್ವ ಸಮಾಜ್ ಅಸೋಸಿಯೇಶನ್, ಜನನಿ ಚಾರಿಟೆಬಲ್ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಕರ್ನಾಟಕ, ಕನ್ನಡ ಕಟ್ಟೆ, ರಕ್ಷಣಾ ವೇದಿಕೆ ಕರಾವಳಿ ಮೊದಲಾದ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News