ಕ್ರೀಡೆಯು ಬದುಕು ರೂಪಿಸುವ ಪ್ರಮುಖ ಮಾಧ್ಯಮ: ಸಂಸದ ನಳಿನ್

Update: 2016-09-13 12:51 GMT

ಪುತ್ತೂರು, ಸೆ.13: ಮಕ್ಕಳು ಕೇವಲ ಅಂಕದ ಹಿಂದೆ ಮಾತ್ರ ಹೋಗುವುದಲ್ಲ. ಸರ್ವಾಂಗೀಣವಾಗಿ ಪ್ರಗತಿ ಸಾಗಿಸುವ ನಿಟ್ಟಿನಲ್ಲಿ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡೆಯು ಬದುಕು ರೂಪಿಸುವ ಪ್ರಮುಖ ಮಾಧ್ಯಮ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದಾಗ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಲಭಿಸುತ್ತದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ದ.ಕ.ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ವತಿಯಿಂದ ಪಾಪೆಮಜಲು ಸ. ಪ್ರೌ. ಶಾಲೆಯ ಆಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ -ಬಾಲಕಿಯರ 2016ನೆ ಸಾಲಿನ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಿದ್ದು, ಆ ಮೂಲಕ ಜಗತ್ತಿನಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ ಕ್ರೀಡಾಪಟುಗಳು ರೂಪುಗೊಳ್ಳಲಿದ್ದಾರೆ. ಅಲ್ಲದೆ, ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಗ್ರಾಮಮಟ್ಟ, ತಾಲೂಕು, ಜಿಲ್ಲಾಮಟ್ಟದಿಂದ ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಪೂರಕವಾಗಿ ಸಿದ್ಧಗೊಳಿಸಲು ಯೋಜನೆ ರೂಪಿಸಲಿದೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ 1 ಸಾವಿರ ಕಿ.ಮೀ.ಗಿಂತ ಹೆಚ್ಚು ದೂರ ತೆರಳಬೇಕಿದ್ದರೆ ವಿಮಾನದಲ್ಲಿ ತೆರಳುವ ಅವಕಾಶವನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಗ್ರಾಮೀಣ ಭಾಗದ ಸೌಕರ್ಯಗಳು ಹೆಚ್ಚಿದರೆ, ಇಲ್ಲಿನವರಿಗೆ ಅವಕಾಶ ಲಭಿಸಿದರೆ ದೇಶದ ಪ್ರಗತಿಗೆ ಅತ್ಯಂತ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ, ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿಭೆಗಳೂ ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ತಾ.ಪಂ. ಸದಸ್ಯ ರಾಧಾಕೃಷ್ಣ ಬೋರ್ಕರ್, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ದೈ.ಶಿ. ಶಿಕ್ಷಕರಾದ ಎಂ.ಮೋನಪ್ಪಹಾಗೂ ನಯನಾ ವಿ. ರೈ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಿದ ದೈ.ಶಿ. ಶಿಕ್ಷಕ ಜಗನ್ನಾಥ ರೈ, ತರಬೇತುದಾರ ಜಗದೀಶ್ ನಾಯ್ಕಾ ಅವರನ್ನು ಸಮ್ಮಾನಿಸಲಾಯಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕಿ ಶಕುಂತಳಾ ಟಿ. ಶೆಟ್ಟಿ ಭೇಟಿ ನೀಡಿ ಶುಭ ಹಾರೈಸಿದರು.

ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸವಿತಾ, ಶಾಲಾ ಕಾರ್ಯಾಧ್ಯಕ್ಷ ಅಮ್ಮಣ್ಣ ರೈ ಡಿ., ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಉದ್ಯಮಿ ರಾಧಾಕೃಷ್ಣ ರೈ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ತಾಲೂಕು ದೈ. ಶಿ. ಶಿಕ್ಷಕರ ಸಂಘದ ಅಧ್ಯಕ್ಷ ಶೇಷಪ್ಪ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಜಿಲ್ಲಾ ಕ್ರೀಡಾ ಶಿಕ್ಷಕರ ಸಂಘದ ಜೋಸೆಫ್, ಎಚ್.ಡಿ. ಶಿವರಾಮ, ಚಿಕ್ಕಪ್ಪ ನಾಯ್ಕಾ, ಗ್ರಾ.ಪಂ. ಸದಸ್ಯರಾದ ತಿಲಕ್ ರೈ, ಪ್ರೇಮಲತಾ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ವಂದಿಸಿದರು. ಪ್ರಕಾಶ್ ಮೂಡೆತ್ತಾಯ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News