×
Ad

ಸುಳ್ಯದ ಉದ್ಯಮಿಯ ಮನೆಯಲ್ಲಿ ದರೋಡೆಗೈದಿದ್ದ ಆರೋಪಿಗಳು ದಾವಣಗೆರೆಯಲ್ಲಿ ಸೆರೆ

Update: 2016-09-13 18:36 IST

ಸುಳ್ಯ, ಸೆ.13: ಸುಳ್ಯದ ವಾಣಿಜ್ಯೋದ್ಯಮಿ ಭಾರತ್ ಆಗ್ರೋ ಮಾಲಕ ರಾಮಚಂದ್ರರ ಮನೆಗೆ ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ, 8 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದರೋಡೆಗೈದಿದ್ದ ದುಷ್ಕರ್ಮಿಗಳು ದಾವಣಗೆರೆ ಪೊಲೀಸರಿಗೆ ಸಿಕ್ಕಿ ಬಿದ್ದಿರುವುದಾಗಿ ತಿಳಿದುಬಂದಿದೆ.

ದಾವಣಗೆರೆಯ ದೇವಸ್ಥಾನವೊಂದರಲ್ಲಿ ವಾಚ್‌ಮೆನ್‌ನ್ನು ಕೊಂದು ಚಿನ್ನಾಭರಣ ದರೋಡೆ ನಡೆಸಿದ ಘಟನೆಗೆ ಸಂಬಂಧಿಸಿ ದಾವಣೆಗೆರೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವರು ತಾವು ಸುಳ್ಯದಲ್ಲಿ ಮನೆ ನುಗ್ಗಿ ದರೋಡೆ ಮಾಡಿದ ತಂಡದಲ್ಲಿ ಇದ್ದುದಾಗಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

2015 ಅಕ್ಟೋಬರ್ 9ರಂದು ರಾತ್ರಿ ದುಷ್ಕರ್ಮಿಗಳು ಭಾರತ್ ಆಗ್ರೋ ರಾಮಚಂದ್ರರ ಮನೆಗೆ ನುಗ್ಗಿ ರಾಮಚಂದ್ರರನ್ನು, ಅವರ ಪತ್ನಿ ಮಂಜುಳರನ್ನು ಹಾಗೂ ಕೆಲಸದಾಕೆ ಸುನೀತರನ್ನು ಕಟ್ಟಿ ಹಾಕಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 65 ಸಾವಿರ ರೂ. ನಗದು ದರೋಡೆ ಮಾಡಿದ್ದರು. ಆರೋಪಿಗಳು ಯಾರೆಂದು ಇದುವರೆಗೆ ಪತ್ತೆಯಾಗಿರಲಿಲ್ಲ.

ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹದಡಿ ಪೋಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನವೊಂದರ ಕಾವಲುಗಾರನನ್ನು ಕಲ್ಲು ಎತ್ತಿ ಹಾಕಿ ಕೊಂದು ಲಕ್ಷಾಂತರ ರೂ.ಗಳ ಚಿನ್ನ ದರೋಡೆ ಮಾಡಿದ ಘಟನೆ ನಡೆದಿತ್ತು. ಅಲ್ಲಿಯ ಡಿವೈಎಸ್ಪಿ ನ್ಯಾಮೇ ಗೌಡ ನೇತೃತ್ವದಲ್ಲಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ದಳ ರಚನೆಯಾಗಿತ್ತು. ಈ ದಳದವರು ಐದು ಮಂದಿಯನ್ನು ಬಂಧಿಸಿದ್ದು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳನ್ನು ವಿಚಾರಣೆಗೊಳಪಡಿಸುವಾಗ ಅವರು ಸುಳ್ಯದ ಆಗ್ರೋ ರಾಮಚಂದ್ರರ ಮನೆಯಲ್ಲಿ ತಾವು ದರೋಡೆ ಮಾಡಿರುವ ವಿಚಾರವನ್ನು ಬಾಯಿಬಿಟ್ಟಿದ್ದಾರೆ.

ಅಂದು ಇಲ್ಲಿ ದರೋಡೆ ಮಾಡುವಾಗ 7 ಮಂದಿ ಬಂದಿದ್ದರು. ಅವರಲ್ಲಿ ಇಬ್ಬರು ಹೊರಗಡೆ ವಾಹನದಲ್ಲಿ ಮತ್ತು ಅಂಗಳದಲ್ಲಿ ನಿಂತಿದ್ದರು. ಐವರು ಒಳಗೆ ಹೋಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆಂದು ಅವರು ತಿಳಿಸಿರುವುದಾಗಿ ಹೇಳಲಾಗುತ್ತಿದೆ.

ಈ ಆರೋಪಿಗಳನ್ನು ದಾವಣಗೆರೆಯ ಹದಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಮೇಲೆ ಸುಳ್ಯ ಪೊಲೀಸರು ಸುಳ್ಯ ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದುಕೊಂಡು ದಾವಣಗೆರೆ ನ್ಯಾಯಾಲಯಕ್ಕೆ ಹೋಗಿ ಅದನ್ನು ಸಲ್ಲಿಸಿ ನ್ಯಾಯಾಲಯದ ಮೂಲಕ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ಕರೆತರಬೇಕಾಗುತ್ತದೆ.

ಈಗ ಬಂಧಿತರಾಗಿರುವ ಆರೋಪಿಗಳ ಮೇಲೆ ಸುಮಾರು 40 ರಷ್ಟು ಕೇಸುಗಳು ಇದ್ದು, ಅವರಿಗೆ ಸುಳ್ಯದ ಆಗ್ರೋ ರಾಮಚಂದ್ರರ ಮನೆಯನ್ನು, ರಾಮಚಂದ್ರರಲ್ಲಿ ಹಿಂದೆ ಕೆಲಸ ಮಾಡಿದ್ದ ವ್ಯಕ್ತಿ ತೋರಿಸಿದ್ದೆಂದು ಹೇಳಲಾಗಿದ್ದು, ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News