×
Ad

ಸುಳ್ಯದ ಯುವಕನ ಮತಾಂತರಕ್ಕೆ ಯತ್ನ : ಮನೆಯವರ ಆರೋಪ

Update: 2016-09-13 18:52 IST

ಸುಳ್ಯ, ಸೆ.13: ಪಂಜದ ಯುವಕನೊಬ್ಬನನ್ನು ಮತಾಂತರಿಸಲು ಯತ್ನಗಳು ನಡೆಯುತ್ತಿವೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜ್ಜಾವರದ ಚೈತನ್ಯ ಆಶ್ರಮದ ಯೋಗೇಶ್ವರಾನಂದ ಸ್ವಾಮೀಜಿ, ಪಂಜದ ಬಾಬ್ಲುಬೆಟ್ಟು ವಾಸುದೇವ ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರ ಜಯನಾರಾಯಣ ಎಂಬವರು ವಿಟ್ಲ ಸಮೀಪದ ಕಾಂತಡ್ಕದ ಡಿ.ಕೆ.ಮುಸ್ತಫಾ ಎಂಬವರ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಲ್ಲಿ ಆತನಿಗೆ ಆಮಿಷವೊಡ್ಡಿ ಬ್ರೈನ್‌ವಾಶ್ ಮಾಡಿದ್ದಾರೆ ಎಂದು ಆರೋಪಿಸಿದರು.

ಜಯನಾರಾಯಣ ಸಣ್ಣದಿರುವಾಗಲೇ ಅವರ ತಾಯಿ ಮೃತಪಟ್ಟಿದ್ದು, ಅಜ್ಜಾವರದ ಮೂಡೂರಿನಲ್ಲಿರುವ ತಾಯಿಯ ತವರು ಮನೆಯಲ್ಲಿ ಬೆಳೆದಿದ್ದರು. 9ನೆ ತರಗತಿವರೆಗೆ ಓದಿದ್ದ ಜಯನಾರಾಯಣ ಬಳಿಕ ಮೈಸೂರು, ಬೆಂಗಳೂರುಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕಳೆದ 2 ವರ್ಷದಿಂದ ವಿಟ್ಲದಲ್ಲಿ ಲಾರಿ ಚಾಲಕನಾಗಿದ್ದು, ಆಗಾಗ ಮೂಡೂರಿಗೆ ಬಂದು ಹೋಗುತ್ತಿದ್ದರು. ಕಳೆದ ಶುಕ್ರವಾರ ವಿಟ್ಲದಲ್ಲಿ ಅಪಘಾತವಾಗಿ ಅವರ ಕಾಲಿಗೆ ಗಾಯವಾಗಿತ್ತು. ಆದರೆ ಆ ವಿಷಯ ಮನೆಯವರಿಗೂ ತಿಳಿಸಿರಲಿಲ್ಲ. ಸಂಬಂಧಿಕರಿಂದ ವಿಷಯ ತಿಳಿದ ಮನೆಯವರು ವಿಟ್ಲಕ್ಕೆ ತೆರಳಿದಾಗ ಅಲ್ಲಿ ಗೋದಾಮಿನಲ್ಲಿ ಹಾಸಿಗೆಯಲ್ಲಿ ಮಲಗಿಸಲಾಗಿತ್ತು. ಅಲ್ಲಿಂದ ಕರೆತಂದು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮನೆಯವರು ಆರೋಪಿಸಿದರು.

ಕೆಲವು ಸಮಯದ ಹಿಂದೆ ಜಯನಾರಾಯಣ ಮೂಡೂರಿನ ಮನೆಗೆ ಬಂದಿದ್ದಾಗ ತಾನು ಮುಸ್ಲಿಂ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದ. ತಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಆತನ ಅತ್ತೆ ಗೀತಾ ದೂರಿದರು. ಆತ ಹೆಚ್ಚಾಗಿ ಮುಸ್ಲಿಂ ಯುವಕರೊಂದಿಗೆ ಸುತ್ತಾಟ ನಡೆಸುತ್ತಿದ್ದ ಎಂದು ಮಾವ ಚಿತ್ರಕುಮಾರ್ ದೂರಿದರು.

ಜಯನಾರಾಯಣರ ಮಾವ ಜಗನ್ನಾಥ, ಚಿಕ್ಕಮ್ಮ ಗೀತಾ, ಎಪಿಎಂಸಿ ಸದಸ್ಯ ಶಂಕರ್ ಪೆರಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆರೋಪ ಅಲ್ಲಗಳೆದ ಯುವಕ

 ಮತಾಂತರದ ಕುರಿತು ತನ್ನ ಮನೆಯವರು ಮಾಡಿರುವ ಆರೋಪವನ್ನು ಜಯನಾರಾಯಣ ಅಲ್ಲಗಳೆದಿದ್ದಾರೆ.

ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯನಾರಾಯಣ ಅವರನ್ನು ಈ ಕುರಿತು ಮಾತನಾಡಿಸಿದಾಗ, ತಾನು ಅಪಘಾತವಾಗಿರುವ ವಿಷಯ ಮನೆಯವರಿಗೆ ತಿಳಿಸಿಲ್ಲ. ತಿಳಿಸಬೇಕು ಎಂದು ತನಗೆ ಗೊತ್ತಾಗಿಲ್ಲ. ಆದರೆ ತಾನು ಮತಾಂತರದ ಕುರಿತು ಯೋಚನೆಯನ್ನೇ ಮಾಡಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News