ಸೆ.27ರಂದು ಪುರಭವನದಲ್ಲಿ ಜಿಲ್ಲಾಮಟ್ಟದ ಜನಮನ ಕಾರ್ಯಕ್ರಮ: ಸಚಿವ ರೈ

Update: 2016-09-13 15:07 GMT

ಮಂಗಳೂರು, ಸೆ.13:ರಾಜ್ಯ ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲು ಹಾಗೂ ಸರಕಾರದ ಸಾಧನೆಗಳ ಬಗ್ಗೆ ತಿಳಿಸಲು ಸೆ.27ರಂದು ನಗರದ ಪುರಭವನದಲ್ಲಿ ಜನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಗೂ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂದರ್ಭದಲ್ಲಿ ತಿಳಿಸಿದರು.

ಈ ಹಿಂದೆ ಜಿಲ್ಲೆಯಲ್ಲಿ ನಡೆಸಿದ ಜನಮನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸರಕಾರದ ಕಾರ್ಯಕ್ರಮಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಜನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರಕಾರದ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ರಮಾನಾಥ ರೈ ತಿಳಿಸಿದರು.

ಜಿಲ್ಲಾ ರಂಗಮಂದಿರ ಯೋಜನೆಗೆ ಶೀಘ್ರದಲ್ಲಿ ಚಾಲನೆ

ದಿಲ್ಲಿಯ ಠಾಗೋರ್ ಪ್ರತಿಷ್ಠಾನದಿಂದ ಜಿಲ್ಲಾ ರಂಗ ಮಂದಿರಕ್ಕೆ ಸಲ್ಲಿಸಲಾದ ಪ್ರಸ್ತಾಪಕ್ಕೆ ಮಂಜೂರಾತಿ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಕನ್ನಡ ಸಂಸ್ಕ್ಕೃತಿ ಇಲಾಖೆಯ ಮೂಲಕ 15 ಕೋಟಿ ರೂ. ಯೋಜನೆಗೆ ಮಂಜೂರಾತಿ ದೊರೆತ ಹಿನ್ನೆಲೆಯಲ್ಲಿ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರಮಾನಾಥ ರೈ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ

ಜಿಲ್ಲಾ ಮಟ್ಟದಲ್ಲಿ ಶೀಘ್ರದಲ್ಲಿ ಅಂಬೇಡ್ಕರ್ ಭವನ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಟೆಂಡರ್ ಕರೆಯಲಾಗುವುದು ಎಂದು ರಮಾನಾಥ ರೈ ತಿಳಿಸಿದರು.

ಪುಚ್ಚೆ ಮೊಗ್ರುವಿನಿಂದ ಮೂಡುಬಿದಿರೆಗೆ ಕುಡಿಯುವ ನೀರು

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಮೂಡುಬಿದಿರೆ ಪುರಸಭೆಗೆ ಹಾಗೂ ಇತರ 5 ಗ್ರಾಮ ಪಂಚಾಯತ್‌ಗಳಿಗೆ ನೀರು ಪೂರೈಸುವ 36 ಕೋಟಿ ರೂ. ವೆಚ್ಚದ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಪುಚ್ಚೆ ಮೊಗರುವಿನಲ್ಲಿ ಸೋಹಮ್ ಪವರ್ ಪೊಜೆಕ್ಟ್ ನಿರ್ಮಿಸಿರುವ ಕಿಂಡಿ ಅಣೆ ಕಟ್ಟಿನಿಂದ ಡಿಸೆಂಬರ್ ನಂತರ ನೀರು ಬಳಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ರಮಾನಾಥ ರೈ ತಿಳಿಸಿದರು.

ಬಂಟ್ವಾಳ ವಿಧಾನ ವ್ಯಾಪ್ತಿಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಂಗ ಬೆಟ್ಟು, ಕರೋಪಾಡಿ, ನರಿಕೊಂಬು ಸಜೀಪ ಮುನ್ನೂರು, ಸರಪಾಡಿಯಲ್ಲಿ ಅನುಷ್ಟಾನಗೊಳಿಸುವ ಇಂಗಿತ ಇದೆ. ಈ ಪೈಕಿ ಎರಡು ಯೋಜನೆಗಳಿಗೆ ಮಾತ್ರ ಸಚಿವ ಸಂಪುಟದ ಒಪ್ಪಿಗೆ ದೊರೆತಿಲ್ಲ. ಉಳಿದೆಲ್ಲಾ ಯೋಜನೆಗಳು ಮಂಜೂರಾತಿಗೊಂಡು ಪ್ರಗತಿಯಲ್ಲಿದೆ ಎಂದು ರಮಾನಾಥ ರೈ ತಿಳಿಸಿದರು.

ಬಂಟ್ವಾಳದ ಬೆಂಜನ ಪದವಿನಲ್ಲಿ ಕ್ರೀಡಾಂಗಣ ನಿರ್ಮಾಣ

ಬಂಟ್ವಾಳದ ಬೆಂಜನ ಪದವಿನಲ್ಲಿ ಜಿಲ್ಲಾ ಕ್ರೀಡಾಂಗಣದ ಮಾದರಿಯ ಕ್ರೀಡಾಂಗಣ ನಿರ್ಮಾಣ ಮಾಡಲು 9.11ಎಕ್ರೆ ಭೂಮಿಯನ್ನು ನಿಗದಿಪಡಿಸಲಾಗಿದೆ. ಈ ಕ್ರೀಡಾಂಗಣ ಯೋಜನೆಯಲ್ಲಿ 400ಮೀಟರ್ ಟ್ರಾಕ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ರಮಾನಾಥ ರೈ ತಿಳಿಸಿದರು.

ಬಂಟ್ವಾಳದಲ್ಲಿ ಪಂಜೆ ಮಂಗೇಶ್ವರ ರಾವ್ ಸ್ಮಾರಕ ಭವನವನ್ನು 4.19 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಲಾಗುವುದು. 700 ಜನರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವ ಸಭಾಂಗಣ, ಗ್ರಂಥಾಲಯವನ್ನು ಈ ಸ್ಮಾರಕ ಭವನ ಒಳಗೊಂಡಿದೆ. ಬಂಟ್ವಾಳ ಪುರಸಭೆ ತ್ಯಾಜ್ಯ ಸಂಗ್ರಹಣಾ ಪ್ರದೇಶದಿಂದ ಸಂತ್ರಸ್ತರಾಗುವ ನಿವಾಸಿಗಳಿಗೆ ನಿವೇಶನ ನೀಡುವ ಬಗ್ಗೆ ಕ್ರಮ ಕೈ ಗೊಳ್ಳಲಾಗುವುದು. ಬಂಟ್ವಾಳದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಕ್ರಮ ಕೈ ಗೊಳ್ಳಲಾಗುವುದು. ಈ ಬಗ್ಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಬಂಟ್ವಾಳದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ, ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳ ವಿದ್ಯಾರ್ಥಿನಿ ನಿಲಯ ನಿರ್ಮಾಣ, ಬಂಟ್ವಾಳ ಬೈಪಾಸ್ ಜಂಕ್ಷನ್ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹಾಗೂ ಇತರ ಇಲಾಖಾ ಆಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News