ಬೆಳ್ತಂಗಡಿ: ಸಿಯೋನ್ ಆಶ್ರಮದಲ್ಲಿ ‘ಎಂ.ಫ್ರೆಂಡ್ಸ್’ನಿಂದ ಈದ್ ಮಿಲನ್
ಬೆಳ್ತಂಗಡಿ, ಸೆ.13: ಕರುಣೆ ಎನ್ನುವುದು ಮಾನವನ ಹೃದಯದಿಂದ ಹೊರಹೊಮ್ಮಿದಾಗ ಸುಸ್ಥಿರ ಸಮಾಜ ಸಾಧ್ಯ. ಅದರಿಂದ ಸೃಷ್ಟಿಕರ್ತನ ಸಂಪ್ರೀತಿಗೆ ಪಾತ್ರರಾಗಬಹುದು. ಈ ನಿಟ್ಟಿನಲ್ಲಿ ಅಸಹಾಯಕರನ್ನು ಹುಡುಕಿ ಸಹಾಯಹಸ್ತ ಚಾಚುವ ಎಂ.ಫ್ರೆಂಡ್ಸ್‌ನ ಕಾರ್ಯ ಶ್ಲಾಘನೀಯ ಎಂದು ಗಂಡಿಬಾಗಿಲು ಸಿಯೋನ್ ಆಶ್ರಮದ ಸ್ಥಾಪಕ ಯು.ಸಿ.ಪೌಲೋಸ್ ಹೇಳಿದ್ದಾರೆ.
ಅವರು ಮಂಗಳವಾರ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಮಂಗಳೂರು ಎಂ.ಫ್ರೆಂಡ್ಸ್ ವತಿಯಿಂದ ನಡೆದ ಈದ್ ಮಿಲನ್ ಹಾಗೂ ‘ಆಶ್ರಮವಾಸಿಗಳ ಜೊತೆಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭ ಎಂ.ಫ್ರೆಂಡ್ಸ್ ಹಾಗೂ ಹೋಪ್ ಫೌಂಡೇಶನ್ ವತಿಯಿಂದ ಧನಸಹಾಯ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ‘ಎಂ.ಫ್ರೆಂಡ್ಸ್’ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ, ಪ್ರತಿ ಮನೆಯ ಸದಸ್ಯರ ಮನದಲ್ಲಿ ಸೇವಾ ಮನೋಭಾವ ಮೂಡಿದಾಗ ಸಮಾಜದಲ್ಲಿ ಆಶ್ರಮಗಳ ಅಗತ್ಯವಿರಲಿಲ್ಲ ಎಂದು ಹೇಳಿದರು.
ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್ ಸುಲ್ತಾನ್ ಸೈಯದ್ ಬಕ್ರೀದ್ ಸಂದೇಶ ನೀಡಿದರು.
ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಜಿ.ಪಂ. ಸದಸ್ಯೆ ನಮಿತಾ ಶೆಟ್ಟಿ, ತಾ.ಪಂ. ಸದಸ್ಯ ಸೆಬಾಸ್ಟಿಯನ್, ಗ್ರಾ.ಪಂ. ಸದಸ್ಯ ವಿ.ಟಿ. ವರ್ಗೀಸ್, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ರಶೀದ್ ವಿಟ್ಲ, ಅಬೂಬಕರ್ ನೋಟರಿ, ಶಾಕಿರ್ ಹಾಜಿ, ಹನೀಫ್ ರಿಚ್ಮಂಡ್, ಸಮದ್ ಸೋಂಪಾಡಿ, ಅಬ್ಬಾಸ್ ಕಲ್ಲಂಗಳ, ಅನ್ಸಾರ್ ಬೆಳ್ಳಾರೆ, ಡಿ.ಎಂ. ರಶೀದ್ ಉಕ್ಕುಡ, ರಫೀಕ್ ನೆಟ್ಲ, ಆಶಿಕ್ ಕುಕ್ಕಾಜೆ, ರಶೀದ್ ಕಕ್ಕಿಂಜೆ, ಮೇರಿ ಪೌಲೋಸ್, ಸುಭಾಶ್, ಸಂಧ್ಯಾ, ಶೋಭಾ ಉಪಸ್ಥಿತರಿದ್ದರು.
ಆಶ್ರಮ ಸಿಬ್ಬಂದಿ ಜಾನ್ಸಿ ಸ್ವಾಗತಿಸಿದರು. ಜಲಜಾಕ್ಷಿ ಮತ್ತು ತಂಡ ಪ್ರಾರ್ಥಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಅಬೂಬಕರ್ ನೋಟರಿ ವಿಟ್ಲ ವಂದಿಸಿದರು.