×
Ad

ಕಣಿವೆಯಿಡೀ ಕರ್ಫ್ಯೂ: ಹೆಲಿಕಾಪ್ಟರ್-ಡ್ರೋನ್ ಕಣ್ಗಾವಲು

Update: 2016-09-13 22:55 IST

ಶ್ರೀನಗರ, ಸೆ.13: ಕಣಿವೆಯಲ್ಲಿ ಹಿಂಸಾಚಾರ ಮುಂದುವರಿದ್ದಲ್ಲಿ ಸಿದ್ಧವಾಗಿರುವ ಸೇನೆ ಕಾರ್ಯಾಚರಣೆಗಿಳಿಯುವ ಸಾಧ್ಯತೆಯಿದೆ.

ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಮುಖ್ಯಾ ಲಯದಲ್ಲಿ ಅದರ ಸಾಮಾನ್ಯ ಸಭೆಯ 71ನೆ ಅಧಿವೇಶನದ ಆರಂಭದ ದಿನವಾದ ಇಂದು, ಕಾಶ್ಮೀರದಲ್ಲಿರುವ ವಿಶ್ವಸಂಸ್ಥೆಯ ಸ್ಥಳೀಯ ಕಚೇರಿಗಳಿಗೆ ಮೆರವಣಿಗೆ ನಡೆಸುವ ಕರೆಯನ್ನು ಪ್ರತ್ಯೇಕತಾವಾದಿಗಳು ನೀಡಿರುವ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಕರ್ಫ್ಯೂ ವಿಧಿಸಲಾಗಿದ್ದು, ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳ ಮೂಲಕ ಕಣ್ಗಾವಲು ನಡೆಸಲಾಗುತ್ತಿದೆ.
ಮುಂದಿನ 72 ತಾಸುಗಳ ಕಾಲ ಕಾರ್ಯಾ ಚರಣೆ ನಿಲ್ಲಿಸುವಂತೆ ಏರ್‌ಟೆಲ್, ಏರ್‌ಸೆಲ್, ವೊಡಾಫೋನ್ ಹಾಗೂ ರಿಲಯನ್ಸ್ ಟೆಲಿಕಾಂಗಳಿಗೆ ಆದೇಶ ನೀಡಲಾಗಿದೆ. ಬಿಎಸ್ಸೆನ್ನೆಲ್‌ಗೂ ಇಂಟರ್ನೆಟ್ ಸೇವೆ ನಿಲ್ಲಿಸುವಂತೆ ಸೂಚಿಸಲಾಗಿದೆ.

ಕಾಶ್ಮೀರ ಹಿಂಸೆಗೆ ಇನ್ನೂ 2 ಬಲಿ
ಕಾಶ್ಮೀರದಲ್ಲಿ ಇಂದು ಭದ್ರತಾ ಪಡೆಗಳು ಹಾಗೂ ಕಲ್ಲುತೂರಾಟ ನಿರತ ಪ್ರತಿಭಟನಕಾರರ ನಡುವೆ ಹೊಸದಾಗಿ ನಡೆದ ಘರ್ಷಣೆಗಳಲ್ಲಿ ಇಬ್ಬರು ಯುವಕರು ಹತರಾಗಿದ್ದಾರೆ. ಅಧಿಕಾರಿಗಳು ಎಲ್ಲ 10 ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದ್ದಾರೆ.
 ಬಂಡಿಪೊರಾದಲ್ಲಿ ಈದ್ ಪ್ರಾರ್ಥನೆ ಮುಗಿದೊಡನೆಯೇ, ಪ್ರತಿಭಟನಾಕಾರರ ಗುಂಪೊಂದು ಭದ್ರತಾ ಪಡೆಗಳತ್ತ ಕಲ್ಲೆಸೆಯಲು ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ದುಷ್ಕರ್ಮಿಗಳತ್ತ ಅಶ್ರುವಾಯು ಹಾಗೂ ಪಾಲೆಟ್ ಗನ್‌ಗಳಿಂದ ದಾಳಿ ನಡೆಸಿದವು. ಅಶ್ರುವಾಯು ಶೆಲ್ ಬಡಿದು 20ರ ಹರೆಯದ ಮುರ್ತಾಝಾ ಅಹ್ಮದ್ ಎಂಬಾತ ಸಾವಿಗೀಡಾಗಿದ್ದು, ಹಲವರು ಗಾಯಗೊಂಡರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯ ಬೋಂಪೊರಾದಲ್ಲಿ ಹೊಸ ಪ್ರತಿಭಟನೆಯ ವೇಳೆ ಯುವಕನೊಬ್ಬ ಅಸು ನೀಗಿದ ಬಳಿಕ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆಯೆಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೂಂಛ್: ಎಲ್ಲಾ ನಾಲ್ವರು ಉಗ್ರರ ಹತ್ಯೆ
ಮೂರು ದಿನಗಳ ಕಾರ್ಯಾಚರಣೆ ಅಂತ್ಯ
ಜಮ್ಮು, ಸೆ.13: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ನಿರ್ಮಾಣ ಹಂತದ ಮಿನಿ ಸೆಕ್ರಿಟರಿಯೇಟ್ ಕಟ್ಟಡದಲ್ಲಿ ಅಡಗಿಕೊಂಡಿದ್ದ ಎಲ್ಲಾ ನಾಲ್ವರು ಉಗ್ರಗಾಮಿಗಳನ್ನು ಹತ್ಯೆಗೈಯಲಾಗಿದ್ದು, ಕಾರ್ಯಾಚರಣೆ ಮುಕ್ತಾಯಗೊಂಡಿರುವುದಾಗಿ ಸೇನೆ ಹಾಗೂ ಪೊಲೀಸರು ಮಂಗಳವಾರ ಘೋಷಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಸೇನೆ ಹಾಗೂ ಭದ್ರತಾ ಪಡೆಗಳು ನಿರ್ಮಾಣ ಹಂತದಲ್ಲಿರುವ ಮಿನಿ ಸೆಕ್ರಿಟರಿಯೇಟ್ ಕಟ್ಟಡ ಸಂಕೀರ್ಣದಲ್ಲಿ ನುಸುಳಿದ್ದ ಉಗ್ರರನ್ನು ಹೊರದಬ್ಬಲು ಕಾರ್ಯಾಚರಣೆಯನ್ನು ನಡೆಸುತ್ತಿತ್ತು. ಇಂದು ಸಂಜೆಯ ವೇಳೆ ಎಲ್ಲಾ ನಾಲ್ವರು ಉಗ್ರರು ಹತರಾಗಿದ್ದಾರೆಂದು ಜಮ್ಮುವಲಯದ ಪೊಲೀಸ್ ಮಹಾನಿರ್ದೇಶಕ ದಾನಿಶ್ ರಾನಾ ತಿಳಿಸಿದ್ದಾರೆ.
 


ಭಾರತೀಯ ಸೇನಾ ಪಡೆಯ ಇಂಜಿನಿಯರಿಂಗ್ ರೆಜಿಮೆಂಟ್‌ನ ಸಿಬ್ಬಂದಿ ಸುಧಾರಿತ ಸ್ಫೋಟಕಗಳನ್ನು ಬಳಸಿ ಕಟ್ಟಡದ ಗೋಡೆಯಲ್ಲಿ 5 ಅಡಿ ಅಗಲದ ರಂಧ್ರ ವೊಂದನ್ನು ನಿರ್ಮಿಸಿದ್ದರು. ಕಟ್ಟಡದ ಪ್ರವೇಶದ್ವಾರದಲ್ಲಿ ಉಗ್ರರು ಸ್ಫೋಟಕಗಳನ್ನು ಹುದುಗಿರಿಸಿರುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಆ ರಂಧ್ರದ ಮೂಲಕ ಕಟ್ಟಡದೊಳಗೆ ಪ್ರವೇಶಿಸಿ ಉಗ್ರರ ಮೇಲೆ ದಾಳಿ ನಡೆಸಿದರೆಂದು ಮೂಲ ಗಳು ತಿಳಿಸಿವೆ. ರವಿವಾರ ಮುಂಜಾನೆ 7:30ರ ಸುಮಾರಿಗೆ ಆರಂಭವಾಗಿತ್ತು. ಕಾರ್ಯಾಚರಣೆಯ ವೇಳೆ ಒಬ್ಬ ಪೊಲೀಸ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News