ಬಸ್ ನಿಲುಗಡೆಗೆ ಆಗ್ರಹಿಸಿ ರಸ್ತೆ ತಡೆ
Update: 2016-09-13 23:51 IST
ಬೆಳ್ತಂಗಡಿ, ಸೆ.13: ಪ್ರಸನ್ನ ಕಾಲೇಜಿನ ಬಳಿ ಕೆಎಸ್ಸಾರ್ಟಿಸಿ ವೇಗದೂತ ಬಸ್ಸುಗಳ ನಿಲುಗಡೆಗೆ ಆಗ್ರಹಿಸಿ ಪ್ರಸನ್ನ ಕಾಲೇಜಿನ ಎಬಿವಿಪಿ ಘಟಕದ ವಿದ್ಯಾರ್ಥಿ ಸದಸ್ಯರು ಮಂಗಳವಾರ ಕಾಲೇಜಿನ ಎದುರುಗಡೆ ರಸ್ತೆ ತಡೆ ಮಾಡಿದರು. ಬಳಿಕ ಕಾಲೇಜಿನಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಕಾಲೇಜಿನ ಸುಮಾರು 2000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಬಸ್ಸುಗಳನ್ನು ಅವಲಂಬಿಸಿದ್ದಾರೆ. ಪ್ರಸ್ತುತ ಬಸ್ಸಿನವರು ಕಾಲೇಜಿನಿಂದ ಸುಮಾರು ದೂರದಲ್ಲಿ ನಿಲ್ಲಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನನುಕೂಲ ವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ನಿಲುಗಡೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನವೀನ್, ದೀಕ್ಷಿತ್ ಕುಮಾರ್, ಆಶಿತ್ ರೈ, ಪವಿತ್, ಲಕ್ಷ್ಮೀಶ, ಸೂರಜ್, ದೀಕ್ಷಿತ್, ಸಿಂಧೂ, ಸುಶ್ಮಿತಾ ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.