9ವರ್ಷದ ಮಗನನ್ನು ಕೊಂದೆ ಎಂದು ಪೊಲೀಸ್ ಠಾಣೆಗೆ ಬಂದು ತಿಳಿಸಿದ ತಂದೆ !
ಕೋತಮಂಗಲಂ,ಸೆ.14: 9 ವರ್ಷದ ಪುತ್ರನನ್ನು ಉಸಿರುಗಟ್ಟಿಸಿ ಕೊಂದೆ ಎನ್ನುತ್ತಾ ತಂದೆಯೊಬ್ಬ ಪೊಲೀಸ್ ಠಾಣೆಯ ಮೊರೆ ಹೋದ ಘಟನೆ ಕೋತಮಂಗಲಂ ಸಮೀಪದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮನೆಸಮೀಪವಿರುವ ರಬ್ಬರ್ ತೋಟದ ಪಾಳುಬಾವಿಯಲ್ಲಿ ಬಾಲಕ ಮೃತದೇಹ ಪತ್ತೆಯಾಗಿದೆ. ಈ ಧೂರ್ತ ತಂದೆ ಹತ್ಯೆನಡೆಸಲು ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಡಾನಾಟ್ ಚುರಮುಡಿ ವೆಳ್ಳಪಾಯಿಲ್ ಬಾಬು ನಿನ್ನೆ ಬೆಳಗ್ಗೆ ಕೊಡಾನಾಟ್ ಪೊಲೀಸ್‌ಠಾಣೆಗೆ ಬಂದು ಪುತ್ರ ವಾಸುದೇವ್‌ನನ್ನು ತಾನೇ ಕೊಂದಿರುವೆ ಎಂದು ತಿಳಿಸಿದ್ದಾನೆ. ಬಾಬು ಹೇಳಿಕೆಯಂತೆ ಪೊಲೀಸರು ಈತನ ಮನೆ ಸಮೀಪದ ರಬ್ಬರ್ ತೋಟದಲ್ಲಿರುವ ಪಾಳು ಬಾವಿಯಿಂದ ಶವವನ್ನು ಪತ್ತೆಹಚ್ಚಿದ್ದಾರೆ. ಕಳೆದ ಒಂಬತ್ತನೆ ತಾರೀಕಿನಂದು ರಾತ್ರೆ ಒಂದೂವರೆಗಂಟೆಗೆ ಮಗನನ್ನು ನಿದ್ರೆಯಲ್ಲಿ ಉಸಿರುಗಟ್ಟಿಸಿ ಕೊಂದಿದ್ದೇನೆ ಎಂದು ಬಾಬು ತಿಳಿಸಿದ್ದಾನೆ.
ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದೆ ಆದರೆ ತನ್ನಿಂದ ಅದು ಸಾಧ್ಯವಾಗಲಿಲ್ಲ. ಆನಂತರ ಊರು ತೊರೆದಿದ್ದೆ. ಮನೋವ್ಯಥೆ ತಾಳಲಾಗದೆ ತಾನು ಪೊಲೀಸ್‌ಠಾಣೆಗೆ ಬಂದಿದ್ದೇನೆ ಎಂದು ಹಂತಕ ತಂದೆ ಪೊಲೀಸರಿಗೆ ವಿವರಿಸಿದ್ದಾನೆ.
ಬಾಬು ಪುಲ್ಲುವಯಿ ಎಂಬಲ್ಲಿನ ಸಾಮಿಲ್ ಕಾರ್ಮಿಕನಾಗಿದ್ದು, ಈತ ಓಣಂ ಚೀಟಿವ್ಯವಹಾರ ನಡೆಸುತ್ತಿದ್ದ. ಸುಮಾರು 20,000 ರೂಪಾಯಿ ಓಣಂಗಿಂತ ಮೊದಲು ಬಾಬು ತನ್ನ ಚೀಟಿಗೆ ಸೇರಿದವರಿಗೆ ಆತ ನೀಡಬೇಕಾಗಿತ್ತು. ಇದಕ್ಕಾಗಿಯೇ ಪುಲ್ಲುವಯಿ ಎಂಬಲ್ಲಿನ ಇನ್ನೊಬ್ಬ ವ್ಯಕ್ತಿಯೊಬ್ಬರ ಚೀಟಿಗೆ ಬಾಬು ಸೇರಿದ್ದ. ಆ ಚೀಟಿಯ ಹಣ ಸರಿಯಾದ ಸಮಯಕ್ಕೆ ಸಿಗದ್ದದ್ದರಿಂದ ಊರವರ ಮುಂದೆ ತಲೆಎತ್ತಿ ನಡೆಯಲು ಸಾಧ್ಯವಿಲ್ಲ ಎಂದು ವ್ಯಥೆಯಿಂದ ಈ ಕೃತ್ಯ ನಡೆಸಿದ್ದೇನೆ ಎಂದು ಬಾಬು ಪೊಲೀಸರಿಗೆ ತಿಳಿಸಿದ್ದಾನೆ.
ಹಲವು ಕಡೆ ಪತಿ ಮತ್ತು ಮಗನನ್ನು ಹುಡುಕಿ ವಿಫಲಳಾದ ಬಾಬುನ ಪತ್ನಿ ಹನ್ನೊಂದನೆ ತಾರೀಕಿನಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವ ವೇಳೆಯೇ ಬಾಬು ಠಾಣೆಗೆ ಹಾಜರಾಗಿ ಮಗನನ್ನು ಕೊಂದ ವಿಷಯ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಊರವರು ಓಣಂನ ಗಡಿಬಿಡಿಯಲ್ಲಿರುವಾಗಲೇ ಹೀಗೊಂದು ಕೊಲೆನಡೆದ ಸುದ್ದಿ ತಿಳಿದು ಅವರು ಚಕಿತಗೊಂಡಿದ್ದಾರೆಂದು ವರದಿ ತಿಳಿಸಿದೆ.