ಕ್ಯಾಂಪ್ಕೋದಿಂದ ‘ಡಾರ್ಕ್ ಟ್ಯಾನ್’ ಚಾಕಲೇಟ್ ಬಿಡುಗಡೆ

Update: 2016-09-14 09:49 GMT

ಮಂಗಳೂರು, ಸೆ.14: ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ನೂತನ ಚಾಕಲೇಟ್ ಉತ್ಪನ್ನವಾದ ‘ಡಾರ್ಕ್ ಟ್ಯಾನ್’ ಇಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಕ್ಯಾಂಪ್ಕೋ ಕಚೇರಿಯಲ್ಲಿಂದು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ)ದ ನಿರ್ದೇಶಕ ಡಾ.ಚೌಡಪ್ಪ ನೂತನ ಚಾಕಲೇಟ್ ಬಿಡುಗಡೆಗೊಳಿಸಿದರು. ಬಳಿಕ ಈ ಚಾಕಲೇಟ್‌ನ ವೈಶಿಷ್ಟವನ್ನು ವಿವರಿಸಿದ ಅವರು, ಡಾರ್ಕ್ ಚಾಕಲೇಟ್ ಆಗಿರುವುದರಿಂದ ಇದು ಅತ್ಯಧಿಕ ಪೌಷ್ಟಿಕಾಂಶವನ್ನು ಹೊಂದಿದ್ದು, ಯಾವುದೇ ವಾತಾವರಣದಲ್ಲೂ ಇದು ಕರಗಿ ನೀರಾಗುವುದಿಲ್ಲ. ಹಾಗಾಗಿ ಇದನ್ನು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿಡುವ ಅಗತ್ಯವಿಲ್ಲ ಎಂದರು. ಈ ಸಂದರ್ಭ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, 2015-16ನೆ ಸಾಲಿನಲ್ಲಿ 1,591 ಕೋಟಿ ರೂ. ವ್ಯವಹಾರ ನಡೆಸಿ ಹೊಸ ದಾಖಲೆಯನ್ನು ಸೃಷ್ಟಿಸಿರುವುದಲ್ಲದೆ 19 ಕೋಟಿ ರೂ. ಲಾಭವನ್ನು ಪಡೆದಿದೆ ಎಂದು ಕ್ಯಾಂಪ್ಕೋ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶೀಯ ಅಡಿಕೆಯ ಭವಿಷ್ಯವನ್ನು ಭದ್ರಗೊಳಿಸುವಲ್ಲಿ ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಡಿಕೆ ಮಾರುಕಟ್ಟೆ ವಿಸ್ತರಣೆಗಾಗಿ ಕ್ಯಾಂಪ್ಕೋ ನಿಯೋಗವು ಚೀನಾ ಪ್ರವಾಸ ಕೈಗೊಂಡಿದ್ದು, ಎಳೆ ಅಡಿಕೆಯನ್ನು ಆ ದೇಶಕ್ಕೆ ರಫ್ತು ಮಾಡುವ ಬಗ್ಗೆ ಪ್ರಾಯೋಗಿಕ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಸಿಪಿಸಿಆರ್‌ಐನ ಸಹಯೋಗದೊಂದಿಗೆ ತಜ್ಞರ ಸಮಿತಿಯ ಶಿಫಾರಸಿನಂತೆ ಅಡಿಕೆಯ ಉತ್ಪಾದನಾ ವೆಚ್ಚವನ್ನು ನಿರ್ಣಯಿಸಲಾಗಿದೆ. ಬಿಳಿ ಅಡಿಕೆಗೆ ಕಿಲೋವೊಂದಕ್ಕೆ 250 ರೂ., ಹಾಗೂ ಕೆಂಪಡಿಕೆಗೆ 337 ರೂ. ಬೆಂಬಲ ಬೆಲೆಯನ್ನು ನಿರ್ಧರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡು ಅಡಿಕೆಯ ವೌಲ್ಯವರ್ಧಿತ ಉತ್ಪನ್ನಗಳನ್ನು ಸಂಶೋಧಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ಕರ್ನಾಟಕ ಸರಕಾರದಿಂದ ಕ್ಯಾಂಪ್ಕೋ ಈಗಾಗಲೇ ಅತ್ಯುತ್ತಮ ರಫ್ತು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಎಫ್‌ಎಸ್‌ಎಸ್‌ಸಿ ನಿಬಂಧನೆಗನುಗುಣವಾಗಿ ಚಾಕಲೇಟು ಕಾರ್ಖಾನೆಯ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸಲಾಗುತ್ತಿದ್ದು, ಇದಕ್ಕಾಗಿ 11.50 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ನೂತನ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಇದರ ಜತೆಯಲ್ಲೇ ಕ್ಯಾಂಪ್ಕೋ ತನ್ನ ಎಲ್ಲಾ ವಹಿವಾಟುಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಸತೀಶ್ಚಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಕೆ., ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News