ಉಳ್ಳಾಲ ದರ್ಗಾದಲ್ಲಿ ನೇತ್ರಾವತಿ ಸಂರಕ್ಷಣಾ ಸಮಿತಿಯಿಂದ ಪ್ರಾರ್ಥನೆ

Update: 2016-09-14 10:00 GMT

ಉಳ್ಳಾಲ, ಸೆ.14: ಎತ್ತಿನಹೊಳೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ರಾಷ್ಟ್ರೀಯ ಹಸಿರುಪೀಠ ಸೆ.21ರಂದು ನೀಡುವ ತೀರ್ಪು ದ.ಕ. ಜಿಲ್ಲೆಯ ಪರವಾಗಿ ಬರಲಿ ಎಂದು ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ಉಳ್ಳಾಲದ ಸೈಯದ್ ಮದನಿ ದರ್ಗಾದಲ್ಲಿ ಬುಧವಾರ ಪ್ರಾರ್ಥನೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ನೇತ್ರಾವತಿ ಸಂರಕ್ಷಣಾ ಸಮಿತಿಯು ಎತ್ತಿನಹೊಳೆ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದ ತೀರ್ಪು ಸೆ.21ರಂದು ಹೊರಬೀಳಲಿದೆ. ಜಿಲ್ಲೆಯ ಜನರಿಗೆ ವಂಚಿತವಾಗದ ರೀತಿಯಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ಜಯ ಸಂದಾಯವಾಗುವಂತೆ ನ್ಯಾಯಾಧೀಶರು ತೀರ್ಪು ಪ್ರಕಟಿಸಲು ಸರ್ವಧರ್ಮದವರ ಆರಾಧನಾಲಯಗಳಲ್ಲಿ ಪ್ರಾರ್ಥನೆ ಇಂದು ಸಲ್ಲಿಸಿದ್ದೇವೆ ಎಂದು ಹೇಳಿದರು.
 ಎತ್ತಿನಹೊಳೆ ಯೊಜನೆ ಜಾರಿಯಾದಲ್ಲಿ ಜಿಲ್ಲೆಯ ಮುಂದಿನ ಜನಾಂಗ ತೊಂದರೆಗೀಡಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ರೀತಿಯ ಸೌಕರ್ಯಗಳಿರುವ ಮಂಗಳೂರಿಗೆ ನೀರಿನ ಅಭಾವ ಉಂಟಾಗುವ ಭೀತಿ ಇದೆ. ಚೆನ್ನೈನ ಹಸಿರು ಪೀಠ ನ್ಯಾಯಾಲಯದಲ್ಲಿರುವ ಪ್ರಕರಣ ದಿಲ್ಲಿಗೆ ವರ್ಗಾವಣೆಯಾಗಿದೆ. ಆ.21ರಂದು ತೀರ್ಪು ಹೊರಬೀಳಲಿದೆ. ಹಲವು ಜನಪ್ರತಿನಿಧಿಗಳು ಹೋರಾಟದಲ್ಲಿ ಕೈ ಜೋಡಿಸಿರುವುದರಿಂದ ಜಿಲ್ಲೆಗೆ ಪೂರಕವಾದ ತೀರ್ಪು ಹೊರಬೀಳುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕುದ್ರೋಳಿ ಗೋಕರ್ಣಾಥೇಶ್ವರ, ಕದ್ರಿ ಶ್ರೀ ಮಂಜುನಾಥೇಶ್ವರ, ಮಿಲಾಗ್ರಿಸ್ ಚರ್ಚ್, ಮಂಗಳಾದೇವಿ ದೇವಳ, ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಎಲ್ಲಾ ಜಾತಿ ಬಾಂಧವರು ಸೇರಿಕೊಂಡು ಪ್ರಾರ್ಥನೆ ನಡೆಸಿದ್ದೇವೆ ಎಂದರು.

ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್, ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಇಗರ್ಜಿಯ ಎಡ್ವಿನ್ ಮಸ್ಕರೇನಸ್ ಮಾತನಾಡಿದರು.

ನೇತ್ರಾವತಿ ಸಂರಕ್ಷಣಾ ಸಮಿತಿ ಉಳ್ಳಾಲ ವಲಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಹೀಂ ಉಚ್ಚಿಲ್, ಎಂ.ಜಿ.ಹೆಗಡೆ, ಪುರುಷೋತ್ತಮ ಚಿತ್ರಾಪುರ, ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News