ಸಿದ್ದರಾಮಯ್ಯರಿಂದ ಕಾಂಗ್ರೆಸ್‌ಗೆ ಶನಿ ಕಾಟ: ಜನಾರ್ದನ ಪೂಜಾರಿ

Update: 2016-09-14 11:26 GMT

ಮಂಗಳೂರು, ಸೆ.14: ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಬಳಿಕ ಕಾಂಗ್ರೆಸ್‌ಗೆ ಶನಿ ಕಾಟ ಶುರುವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಆಪಾದಿಸಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ, ಈ ಆರೋಪ ಮಾಡಿದ ಅವರು, ಗೋವಾ ಸರಕಾರ ಮಹಾದಾಯಿ ಯೋಜನೆಯಲ್ಲಿ 7.5 ಟಿಎಂಸಿ ನೀರು ನೀಡುವಂತೆ ವಾದ ಮಂಡಿಸಿದ್ದಾರೆ. ಇದು ದೊಡ್ಡ ಅಘಾತಕಾರಿ ಬೆಳವಣಿಗೆ ಎಂದರು.

ಕರ್ನಾಟಕದಲ್ಲೇ ಕುಡಿಯಲು ನೀರಿಲ್ಲ. ನಮಗೆ ಸುಮಾರು 5 ಟಿಎಂಸಿ ನೀರು ಕುಡಿಯಲು ಕಡಿಮೆ ಇದೆ. ಹೀಗಿರುವಾಗ ನಾವು ಎಲ್ಲಿಂದ ನೀರು ಬಿಡುವುದು? ದಕ್ಷಿಣ ಕನ್ನಡ ಜಿಲ್ಲೆಗಿಂತ ಚಿಕ್ಕ ರಾಜ್ಯ ಗೋವಾ ಇಷ್ಟು ನೀರು ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇನ್ನಾದರೂ ನಿದ್ದೆಯಿಂದೇಳಿ. ಈ ವಿಷಯದಲ್ಲಿ ಈಗಲೇ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕಾವೇರಿ ನದಿ ವಿಚಾರದಲ್ಲಿ ಎದುರಿಸಿದ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ  ಕಾಂಗ್ರೆಸ್ ಪಕ್ಷವನ್ನು ಹರಾಜು ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ, ಗೋವಾ, ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಕರೆದು ಪರಿಹಾರ ನೀಡುವ ಕೆಲಸ ಮಾಡಿಲ್ಲ. ಸಿಎಂ ಕೂಡಾ ಸಭೆ ನಡೆಸುವಂತೆ ಒತ್ತಡ ಹಾಕಿಲ್ಲ. ರಾಜ್ಯ ಸರಕಾರ ಈಗ ತತ್ತರಿಸಿದೆ. ಹೈಕಮಾಂಡ್ ಉತ್ತರ ನೀಡುವ ಸ್ಥಿತಿ ಇಲ್ಲ. ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೀರಿ. ಯಾವುದೇ ರೀತಿಯ ಸ್ಪಂದನ ನೀಡದ ಸಚಿವ ಎಂ.ಬಿ.ಪಾಟೀಲ್‌ರನ್ನು ಸಂಪುಟದಿಂದ ಕೈಡಿ. ಇಲ್ಲವಾದಲ್ಲಿ ನಿಮಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರವನ್ನು ಮಾಧ್ಯಮದಲ್ಲಿ ಟೀಕೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಪೂಜಾರಿ, ಕಾಂಗ್ರೆಸ್ ಪಕ್ಷವನ್ನು ದೂರುವ ಬದಲು ಪ್ರಧಾನಿಯವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News