ಮಂಗಳೂರು ವಿವಿ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರಾ ಅಳವಡಿಸಿದ್ದ ಆರೋಪಿ ಬಂಧನ

Update: 2016-09-14 18:29 GMT

ಮಂಗಳೂರು, ಸೆ. 14: ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಫೋನ್ ಪತ್ತೆ ಪ್ರಕರಣದ ಆರೋಪಿ ವಿದ್ಯಾರ್ಥಿಯೋರ್ವನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೌಚಾಲಯದಲ್ಲಿ ಮೊಬೈಲ್ ಫೋನ್ ಪತ್ತೆ ಪ್ರಕರಣದಲ್ಲಿ ಕೃತ್ಯ ಎಸಗಿದ ಅದೇ ವಿವಿಯ ದ್ವಿತೀಯ ಎಂಎಸ್‌ಸಿ (ಮರೈನ್ ಜಿಯೋಲಜಿ) ವಿದ್ಯಾರ್ಥಿ ಸುಳ್ಯದ ಮರೋಳಿ ಎಡಮಂಗಲದ ನಿವಾಸಿ ಸಂತೋಷ್ ಎಂ. (22) ಎಂಬಾತನನ್ನು ಬಂಧಿಸಲಾಗಿದೆ ಎಂದರು.

ಆಗಸ್ಟ್ 24ರಂದು ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾಗಿದ್ದು, ಸೆಪ್ಟಂಬರ್ 1ರಂದು ವಿವಿಯ ಕುಲಪತಿಯವರು ಕೋಣಾಜೆ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕ ಅಶೋಕ್ ಪಿ. ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಮೊಬೈಲ್ ಫೋನ್‌ನ್ನು ತಜ್ಞರ ಪರೀಕ್ಷೆಗಾಗಿ ಹೈದರಾಬಾದ್‌ನ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅಲ್ಲದೆ, ಮೊಬೈಲ್ ಹಾಗೂ ಅದರೊಂದಿಗೆ ಪತ್ತೆಯಾಗಿರುವ ಉಪಕರಣಗಳು ಯಾವ ಸ್ಥಳದಿಂದ ಪಡೆಯಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿದ ಮಾಹಿತಿ ಸಂಗ್ರಹಿಸಲಾಗಿತ್ತು. ಪತ್ತೆಯಾಗಿದ್ದ ಮೊಬೈಲ್ ಫೋನ್ ಒಬ್ಬರಿಂದ ಮತ್ತೊಬ್ಬರಂತೆ ಹಲವರು ಉಪಯೋಗಿಸಿದ್ದರು. ಇದರಿಂದಾಗಿ ಆರೋಪಿಯನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ 82 ಮಂದಿಯ ಮೇಲೆ ಅನುಮಾನ ಉಂಟಾಗಿತ್ತು. ಕೊನೆಗೂ ಆರೋಪಿ ಸಂತೋಷ್‌ನನ್ನು ಬಂಧಿಸಿ ವಿಚಾರಿಸಿದಾಗ ತಾನೇ ಮೊಬೈಲ್ ಫೋನ್‌ನ್ನು ಶೌಚಾಲಯದಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಕೃತ್ಯ ಎಸಗಿದ ಸಂದರ್ಭದಲ್ಲಿ ಉಪಯೋಗಿಸಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಂದ್ರಶೇಖರ್ ವಿವರಿಸಿದರು.

ಕಾರ್ಯಾಚರಣೆಯಲ್ಲಿ ಕೊಣಾಜೆ ಠಾಣಾ ನಿರೀಕ್ಷಕ ಅಶೋಕ್ ಸಿ., ಎಸ್ಸೈ ಸುಕುಮಾರನ್, ಸಿಬ್ಬಂದಿಯಾದ ಶಿವಪ್ರಸಾದ್ ಕೆ., ಸಂತೋಷ್, ಸುಖಲತಾ, ಮಂಜುನಾಥ ಚೌಟಗಿ, ದುರ್ಗಾಪ್ರಸಾದ್ ಶೆಟ್ಟಿ, ಚಂದ್ರಶೇಖರ್, ಪೊಲೀಸ್ ಆಯುಕ್ತರ ಕಚೇರಿಯ ಮನೋಜ್ ಪಾಲ್ಗೊಂಡಿದ್ದರು.

ತಂಡಕ್ಕೆ 10 ಸಾವಿರ ನಗದು ಬಹುಮಾನ

ಕೊಣಾಜೆ ಠಾಣಾ ನಿರೀಕ್ಷಕ ಅಶೋಕ್ ಸಿ. ಹಾಗೂ ಸಿಬ್ಬಂದಿಗೆ ಕಮಿಷನರ್ ಚಂದ್ರಶೇಖರ್ ಅವರು 10 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಂಸೆ ಪತ್ರವನ್ನು ವಿತರಿಸಿದರು. ಈ ಮೊತ್ತದಲ್ಲಿ 5,000 ರೂ.ವನ್ನು ಪ್ರಕರಣದಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಓಡಾಟ ನಡೆಸಿದ ಶಿವಪ್ರಸಾದ್ ಕೆ. ಅವರಿಗೆ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News