ಸರಕಾರ ‘ನೇತ್ರಾವತಿ ನದಿ ಪ್ರಾಧಿಕಾರ’ವನ್ನು ರಚಿಸಬೇಕು: ಕೆ.ಎನ್.ಸೋಮಶೇಖರ್

Update: 2016-09-14 13:03 GMT

ಮಂಗಳೂರು, ಸೆ.12: ನೇತ್ರಾವತಿ ನದಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಪ್ರಾಧಿಕಾರ ರಚನೆಯನ್ನು ಸರಕಾರ ಮಾಡಬೇಕು ಎಂದು ಎತ್ತಿನಹೊಳೆ ವಿರೋಧಿ ಕಾನೂನು ಹೋರಾಟಗಾರ ಕೆ.ಎನ್.ಸೋಮಶೇಖರ್ ಆಗ್ರಹಿಸಿದ್ದಾರೆ.

ಅವರು ಪಶ್ಚಿಮಘಟ್ಟ ಸಂರಕ್ಷಣಾ ಹೋರಾಟ ವೇದಿಕೆಯ ವತಿಯಿಂದ ಇಂದು ಉರ್ವ ಮಾರಿಗುಡಿ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಮೊಗವೀರ ಸಮದಾಯವರೊಂದಿಗೆ ಎತ್ತಿನಹೊಳೆ ಹೋರಾಟಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ನದಿಗಳ ನಡುವೆ ಸಮಸ್ಯೆ ಬಾರದಂತೆ ತಡೆಯಲು ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು. ಈ ಮೂಲಕ ಅಂತಾರಾಜ್ಯ, ಅಂತರ್‌ಜಿಲ್ಲೆಗಳ ನಡುವೆ ನಡೆಯುವ ಜಲವಿವಾದವನ್ನು ಬಗೆಹರಿಸಬೇಕು ಎಂದು ಅವರು ಹೇಳಿದರು.

ಎತ್ತಿನಹೊಳೆ ಅವೈಜ್ಞಾನಿಕ ಯೋಜನೆಯಾಗಿದ್ದು ಇದನ್ನು ಇದೀಗ ಕೋಲಾರ, ಚಿಕ್ಕಬಳ್ಳಾಪುರದ ಜನತೆಯೂ ವಿರೋಧಿಸಿದ್ದಾರೆ ಎಂದರು.

ಯಾವುದೇ ನದಿಗೆ ಸಮಸ್ಯೆಯಾದರೂ ಮೊದಲು ಸಮಸ್ಯೆಗೊಳಪಡುವುದು ಮೀನುಗಾರರು. ಸಮುದ್ರಕ್ಕೆ ಹೋಗುವ ನೀರನ್ನು ನಿಲ್ಲಿಸುವುದು ಅವೈಜ್ಞಾನಿಕ. ಯೋಜನೆಗಾಗಿ ಮರಗಳನ್ನು ಯಾವುದೆ ಕಡಿಯದಂತೆ, ಈಗಾಗಲೆ ಕಡಿದಿರುವ ಮರಗಳ ವರದಿಯನ್ನು ನೀಡುವಂತೆ ಮತ್ತು ಮರ ಕಡಿದರೆ ಅದಕ್ಕೆ ಹತ್ತು ಪಟ್ಟು ಅರಣ್ಯೀಕರಣ ಮಾಡುವಂತೆ ನ್ಯಾಯಲಯ ನಿರ್ದೇಶನ ನೀಡಿದೆ ಎಂದರು.

ನ್ಯಾಯಾಲಯದ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಮರ ಕಡಿಯಲು ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ ಯತ್ನಿಸಿದ ಗುತ್ತಿಗೆದಾರರಿಗೆ ಅವಕಾಶ ನೀಡಲಿಲ್ಲವೆಂಬ ಕಾರಣಕ್ಕೆ ಸುಳ್ಳು ಆರೋಪ ಹೊರಿಸಿ ಪ್ರಾಮಾಣಿಕವಾಗಿ ಅರಣ್ಯ ಸಂರಕ್ಷಕರಾಗಿ ಸೇವೆ ಸಲ್ಲಿಸಿದ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ಮೇಲೆ ಅರಣ್ಯ ಇಲಾಖೆ ಕ್ರಮ ಜರುಗಿಸಲು ಮುಂದಾಗಿರುವುದು ಅತ್ಯಂತ ಖಂಡನಾರ್ಹ ಎಂದು ಹೇಳಿದರು.

ರಮಾನಾಥ ರೈಗೆ ಸಿಗುವ ಪಾಲೆಷ್ಟು ಎಂಬುದನ್ನು ಬಹಿರಂಗಪಡಿಸಲಿ

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ರಮಾನಾಥ ರೈ ಅವರು ದ.ಕ ಜಿಲ್ಲೆಯ ಜನತೆಗೆ ದ್ರೋಹವೆಸಗುತ್ತಿದ್ದು ಅವರು ಎತ್ತಿನಹೊಳೆ ಯೋಜನೆಯ ಗುತ್ತಿಗೆದಾರರಿಂದ ಪಡೆದ ಪಾಲೆಷ್ಟು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News