ಅಮೆರಿಕದಿಂದ ಇಸ್ರೇಲ್‌ಗೆ ದಾಖಲೆಯ 2.54 ಲಕ್ಷ ಕೋಟಿ ರೂ. ಸೇನಾ ನೆರವು
ವಾಶಿಂಗ್ಟನ್, ಸೆ. 14: ಅಮೆರಿಕವು ಇಸ್ರೇಲ್‌ಗೆ ದಾಖಲೆಯ 38 ಬಿಲಿಯ ಡಾಲರ್ (2,54,388 ಕೋಟಿ ರೂಪಾಯಿ) ಸೇನಾ ನೆರವು ನೀಡಲಿದೆ. ಈ ಕುರಿತ ನೂತನ ಒಪ್ಪಂದಕ್ಕೆ ಉಭಯ ದೇಶಗಳು ಬುಧವಾರ ಸಹಿ ಹಾಕಿದವು.
ತನ್ನ ಮಧ್ಯ ಪ್ರಾಚ್ಯದ ಅತ್ಯಂತ ಆಪ್ತ ಮಿತ್ರ ದೇಶಕ್ಕೆ ಮುಂದಿನ 10 ವರ್ಷಗಳ ಅವಧಿಯಲ್ಲಿ ಅಮೆರಿಕ ಈ ನೆರವನ್ನು ನೀಡಲಿದೆ.
ಇದು ಅಮೆರಿಕ ಇತರ ಯಾವುದೇ ದೇಶಕ್ಕೆ ನೀಡುವ ನೆರವಿಗಿಂತ ಅಗಾಧ ಪ್ರಮಾಣದ ಹೆಚ್ಚಿನ ನೆರವಾಗಿದೆ.
ಈ ಒಪ್ಪಂದದಲ್ಲಿ ಇಸ್ರೇಲ್ ತನ್ನ ಕೆಲವು ಹಕ್ಕುಗಳನ್ನು ಬಿಟ್ಟುಕೊಟ್ಟಿದೆ. ಹೊಸ ಪ್ಯಾಕೇಜ್‌ನಲ್ಲಿ ವಾರ್ಷಿಕವಾಗಿ ಸಿಗುವ ನೆರವಿಗಿಂತ ಹೆಚ್ಚಿನದನ್ನು ಇಸ್ರೇಲ್ ಅಮೆರಿಕದ ಕಾಂಗ್ರೆಸ್‌ನಿಂದ ಕೇಳುವಂತಿಲ್ಲ. ಹಿಂದೆ ಇಸ್ರೇಲ್ ಅಮೆರಿಕದ ನೆರವಿನ ಒಂದು ಭಾಗವನ್ನು ತನ್ನದೇ ರಕ್ಷಣಾ ಉದ್ಯಮದಲ್ಲಿ ಬಳಸಬಹುದಾಗಿತ್ತು. ಆದರೆ, ನೂತನ ಒಪ್ಪಂದದ ಪ್ರಕಾರ, ಈ ವ್ಯವಸ್ಥೆಯನ್ನು ಇಸ್ರೇಲ್ ಹಂತಗಳಲ್ಲಿ ಕೊನೆಗಾಣಿಸಬೇಕು ಹಾಗೂ ಅಮೆರಿಕದ ನಿಧಿಯನ್ನು ಕೇವಲ ಅಮೆರಿಕದ ಶಸ್ತ್ರಗಳ ಖರೀದಿಗೆ ಬಳಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಒಪ್ಪಂದಕ್ಕೆ ಪೂರ್ವಭಾವಿಯಾಗಿ ಸುಮಾರು 10 ತಿಂಗಳ ಕಾಲ ಅಮೆರಿಕ ಮತ್ತು ಇಸ್ರೇಲ್‌ಗಳ ನಡುವೆ ಮಾತುಕತೆ ನಡೆದಿದೆ. ಇರಾನ್‌ನೊಂದಿಗೆ ಅಮೆರಿಕ ನೇತೃತ್ವದ ಪರಮಾಣು ಶಕ್ತ ದೇಶಗಳು ನಡೆಸಿದ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಈ ಮಾತುಕತೆ ಪ್ರಕ್ರಿಯೆಯಲ್ಲಿ ಬಿಕ್ಕಟ್ಟು ತಲೆದೋರಿತ್ತು.
ಫೆಲೆಸ್ತೀನೀಯರ ವಿಷಯದಲ್ಲಿಯೂ ಅಮೆರಿಕ ಮತ್ತು ಇಸ್ರೇಲ್ ಭಿನ್ನಾಭಿಪ್ರಾಯಗಳನ್ನು ಹೊಂದಿವೆ.
ಆದಾಗ್ಯೂ, ಅಮೆರಿಕದ ಮುಂದಿನ ಸರಕಾರದಿಂದ ಉತ್ತಮ ಶರತ್ತುಗಳನ್ನು ನಿರೀಕ್ಷಿಸುವುದಕ್ಕಿಂತ ಈಗಿನ ಒಬಾಮ ಆಡಳಿತದ ಜೊತೆಗೆ ನೂತನ ಒಪ್ಪಂದಕ್ಕೆ ಸಹಿ ಹಾಕುವುದು ಉತ್ತಮ ಎಂಬ ತೀರ್ಮಾನಕ್ಕೆ ಇಸ್ರೇಲ್‌ನ ಬಲಪಂಥೀಯ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಬಂದರು. ಮುಂದಿನ ವರ್ಷದ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷ ಒಬಾಮ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.