×
Ad

ರಾಮೇಶ್ವರದಿಂದ ಸುರಕ್ಷಿತವಾಗಿ ಆಗಮಿಸಿದ ಕುಂದಾಪುರ ಯಾತ್ರಿಕರು

Update: 2016-09-14 20:54 IST

ಉಡುಪಿ, ಸೆ.14: ಕಾವೇರಿ ಗಲಭೆಯಿಂದ ತಮಿಳುನಾಡಿನ ರಾಮೇಶ್ವರ ದಲ್ಲಿ ಸಿಲುಕಿದ್ದ ಕುಂದಾಪುರ ಮೂಲದ 12ಮಂದಿ ಯಾತ್ರಿಕರು ಇಂದು ಮಧ್ಯಾಹ್ನ 1:30ರ ಸುಮಾರಿಗೆ ಸುರಕ್ಷಿತವಾಗಿ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ತಮ್ಮ ಮನೆ ಸೇರಿದ್ದಾರೆ.

ದಕ್ಷಿಣ ಭಾರತ ಯಾತ್ರೆಗಾಗಿ ರಾಮೇಶ್ವರಕ್ಕೆ ತೆರಳಿದ್ದ 12 ಮಂದಿ ಯಾತ್ರಿಕರ ಕುಂದಾಪುರ ಹಾಲಾಡಿಯ ಟೂರಿಸ್ಟ್ ವಾಹನವನ್ನು ಅಲ್ಲಿಯ ಯುವಕರ ಪಡೆ ಸೆ.12ರಂದು ಧ್ವಂಸಗೈದು ಅದರ ಚಾಲಕ ಕುಂದಾಪುರ ರಟ್ಟಾಡಿಯ ಮಂಜುನಾಥ್ ಕುಲಾಲ್‌ರಿಗೆ ತೀವ್ರವಾಗಿ ಥಳಿಸಿತ್ತು. ಅದರ ನಂತರ ಜೀವ ಭಯದೊಂದಿಗೆ ಅಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದ ಈ ತಂಡ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಇಂದು ಉಡುಪಿಗೆ ಆಗಮಿಸಿದೆ.

ಈ ತಂಡದಲ್ಲಿದ್ದ ಮಂಜುನಾಥ್ ಕುಲಾಲ್‌ರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠಲ ಶೆಟ್ಟಿ, ಗಂಗೊಳ್ಳಿಯ ದಿವಾಕರ ನಾಯಕ್, ಅವರ ಪತ್ನಿ ಹೇಮಾ ನಾಯಕ್, ಮಗ ಹರಿಪ್ರಸಾದ್, ಅಮಾಸೆಬೈಲಿನ ವೆಂಕಪ್ಪ ನಾಯಕ್, ಪತ್ನಿ, ಮಗಳು ಜ್ಯೋತಿ ನಾಯಕ್, ಪೇತ್ರಿಯ ನರಸಿಂಹ ನಾಯಕ್, ಅಮಾಸೆಬೈಲಿನ ದೇವ ಪೂಜಾರಿ, ಶರತ್ ಪೂಜಾರಿ ಇದೀಗ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ವಾಹನವನ್ನು ಸುರಕ್ಷಿತ ವಾಗಿ ಊರಿಗೆ ತರುವ ನಿಟ್ಟಿನಲ್ಲಿ ವಾಹನದ ಚಾಲಕ ಮಂಜುನಾಥ್ ಕುಲಾಲ್(38) ಹಾಗೂ ವಾಹನದ ಮಾಲಕರನ್ನು ಪೊಲೀಸರು ಅಲ್ಲೇ ಉಳಿಸಿಕೊಂಡಿದ್ದಾರೆ.

ಪ್ರತಿವರ್ಷದ ಯಾತ್ರೆ

ವಿಠಲ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ 16 ವರ್ಷಗಳಿಂದ ದಕ್ಷಿಣ ಭಾರತ ಯಾತ್ರೆ ಕೈಗೊಳ್ಳಲಾಗುತಿದ್ದು, ಈ ಬಾರಿಯೂ 12 ಮಂದಿಯ ತಂಡ ಸೆ.9ರಂದು ಟೆಂಪೊ ಟ್ರಾವೆಲ್‌ನಲ್ಲಿ ಯಾತ್ರೆ ಹೊರಟಿತ್ತು. ಪ್ರತಿವರ್ಷವೂ ಇವರು ಮಂಜುನಾಥ್ ಕುಲಾಲ್ ಅವರ ವಾಹನದಲ್ಲಿ ಯಾತ್ರೆ ಹೋಗುತ್ತಿದ್ದು, ಈ ಬಾರಿ ಹೋಗುವ ಸಂದರ್ಭ ಮಂಜುನಾಥ್ ತನ್ನ ವಾಹನವನ್ನು ಮಾರಾಟ ಮಾಡಿದ್ದರು. ಅದಕ್ಕಾಗಿ ಆತ ಕೋಣಿ ಮೂರುಕೈಯ ತನ್ನ ಗೆಳೆಯನ ವಾಹನವನ್ನು ಯಾತ್ರೆಗಾಗಿ ತಂದಿದ್ದರು. ಇವರ ಜೊತೆ ವಾಹನದ ಮಾಲಕ ಕೂಡ ಇದ್ದರು. ಹಾಗೆ ಕುಂದಾಪುರದಿಂದ ಹೊರಟ ಈ ತಂಡ ಮೊದಲು ಗುರುವಾಯೂರು, ತಿರುವನಂತಪುರಂ, ಕನ್ಯಾಕುಮಾರಿಯನ್ನು ಸಂದರ್ಶಿಸಿ ಸೆ.12 ರಂದು ರಾಮೇಶ್ವರ ತಲುಪಿತ್ತು.

ಬೆಳಗಿನ ಜಾವ 4:30ರ ಸುಮಾರಿಗೆ ವಾಹನವನ್ನು ಲಾಡ್ಜ್ ಒಂದರ ಎದುರು ಪಾರ್ಕ್ ಮಾಡಿ ಈ ತಂಡದಲ್ಲಿದ್ದ 12 ಮಂದಿ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಮಂಜುನಾಥ್ ಕುಲಾಲ್ ವಾಹನದಲ್ಲೇ ಮಲಗಿದ್ದರು. ಕಾವೇರಿ ವಿವಾದ ಹಿನ್ನೆಲೆಯಲ್ಲಿ ಆಗ ಅಲ್ಲಿಗೆ ದಾಳಿ ನಡೆಸಿದ ತಮಿಳು ಸಂಘಟನೆಯ ಕಾರ್ಯಕರ್ತರು, ಕರ್ನಾಟಕ ನೊಂದಾವಣಿಯ ವಾಹನವನ್ನು ಕಂಡು ಅದನ್ನು ಪುಡಿಗೈದರು. ನಂತರ ವಾಹನದಲ್ಲಿದ್ದ ಮಂಜುನಾಥ್ ಕುಲಾಲ್‌ರನ್ನು ಕೆಳಗಿಳಿಸಿ ಹಿಗ್ಗಾಮುಗ್ಗ ಥಳಿಸಿ, ಕಾವೇರಿ ತಮಿಳುನಾಡಿಗೆ ಸೇರಿದ್ದು ಎಂದು ಹೇಳುವಂತೆ ಬಲಾತ್ಕರಿಸಿದ್ದರು. ಅದೇ ರೀತಿ ಅಲ್ಲಿದ್ದ ಕರ್ನಾಟಕಕ್ಕೆ ಸೇರಿದ ಆರು ವಾಹನಗಳನ್ನು ಪುಡಿಗೈಯ್ಯಲಾಗಿತ್ತು. ಬಳಿಕ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಲಾಡ್ಜ್ ಮಾಲಕನ ಸ್ಪಂದನೆ

ದೇವಸ್ಥಾನಕ್ಕೆ ಹೋಗಿದ್ದವರು ವಾಪಾಸು 7:30ಕ್ಕೆ ವಾಹನದ ಬಳಿ ಬರುವಾಗ ವಾಹನ ಪುಡಿಯಾಗಿರುವುದು ಕಂಡು ಆತಂಕಕ್ಕೆ ಒಳಗಾದರು. ನಂತರ ಯಾತ್ರಿಕರೆಲ್ಲರು ಲಾಡ್ಜ್‌ನಲ್ಲೇ ತಂಗಿದರು. ಲಾಡ್ಜ್‌ನ ಮಾಲಕರೊಂದಿಗೆ ಮಾತುಕತೆ ನಡೆಸಿದ ಈ 12 ಮಂದಿ ಯಾತ್ರಿಕರು, ತಮಿಳುನಾಡು ನೋಂದಾವಣಿ ವಾಹನದಲ್ಲಿ ತಮ್ಮನ್ನು ಎರ್ನಾಕುಲಂ ರೈಲು ನಿಲ್ದಾಣ ತಲುಪಿಸುವಂತೆ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು ತಮಿಳುನಾಡು ನೊಂದಣಿಯ ಟೆಂಪೊ ಟ್ರಾವೆಲ್‌ನಲ್ಲಿ ಈ 12 ಮಂದಿಯನ್ನು ಸ್ಥಳೀಯ ಓರ್ವನೊಂದಿಗೆ ಸೆ.13 ರಂದು ಅಪರಾಹ್ನ 3:30ರ ಸುಮಾರಿಗೆ ಕಳುಹಿಸಿಕೊಟ್ಟರು. ಸುಮಾರು 500 ಕಿ.ಮೀ. ದೂರದ ಎರ್ನಾಕುಲಂಗೆ ಇವರು ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಬಂದು ತಲುಪಿದರು. ಅಲ್ಲಿಂದ ಬೆಳಗಿನ ಜಾವ 4:55ಕ್ಕೆ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟ ಇವರು ನೇರ ಉಡುಪಿಗೆ ಬಂದು ಮಧ್ಯಾಹ್ನ 1:30ಕ್ಕೆ ಉಡುಪಿ ತಲುಪಿದ್ದಾರೆ.

ಮಹಿಳೆಯರು ಕಾಪಾಡಿದರು

ರೈಲು ನಿಲ್ದಾಣಕ್ಕೆ ಬಂದು ತಲುಪಿದ ಯಾತ್ರಿಕರು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು. ‘ನಾವು ಮರಳಿ ಬರುವಾಗ ನಮ್ಮ ವಾಹನ ಪುಡಿಯಾಗಿತ್ತು. ಬೇರೆ ವಾಹನ ಬಂದು ಢಿಕ್ಕಿ ಹೊಡೆದು ಈ ರೀತಿಯಾಗಿರಬಹುದು ಎಂದು ನಾವು ಮೊದಲು ಭಾವಿಸಿದ್ದೆವು. ಆದರೆ ಇತರ ಆರು ವಾಹನಗಳಿಗೂ ಇದೇ ರೀತಿ ಹಾನಿ ಎಸಗಿರುವುದು ನೋಡಿ ಗಾಬರಿಯಾಯಿತು’ ಎಂದು ಹೇಮಾ ನಾಯಕ್ ತಿಳಿಸಿದರು.

‘ನಾವು ದೇವರ ದರ್ಶನಕ್ಕೆ ಹೋದಾಗ ಈ ಘಟನೆ ನಡೆದಿರುವುದರಿಂದ ನಮ್ಮ ಜೀವ ಉಳಿಯಿತು. ಇಲ್ಲದಿದ್ದರೆ ನಮ್ಮನ್ನು ಕೂಡ ಅವರು ಬಿಡುತ್ತಿರ ಲಿಲ್ಲ. ದಾಳಿಕೋರರು ಪ್ಲಾನ್ ಮಾಡಿಕೊಂಡೆ ಬಂದಿದ್ದರು. ಅವರ ಜೊತೆ ಟಿವಿಯವರನ್ನು ಕೂಡ ಕರೆದುಕೊಂಡು ಬಂದಿದ್ದರು. ಮಂಜುನಾಥ್ ಕುಲಾಲ್‌ಗೆ ಹಲ್ಲೆ ನಡೆಸುವಾಗ ಸ್ಥಳೀಯ ಮಹಿಳೆಯರು ಅವನನ್ನು ಕಾಪಾಡಿದರು’ ಎಂದು ಯಾತ್ರಿ ವಿಠಲ ಶೆಟ್ಟಿ ಹೇಳಿದರು.

ಮಂಜುನಾಥ್ ಕುಲಾಲ್ ತಾಯಿ ಗಿರಿಜಮ್ಮ ಮಾತನಾಡಿ, ನನ್ನ ಮಗನಿಗೆ ಸರಿ ಹೊಡೆದಿದ್ದಾರೆ. ಅವನಿಗೆ ಗಾಯ ಆಗಿದೆ. ಈಗ ಸುರಕ್ಷಿತವಾಗಿದ್ದಾನೆ. ನಮಗೆ ಸ್ಥಳೀಯ ಪೊಲೀಸರು, ಲಾಡ್ಜ್ ಮಾಲಕರು, ಸ್ಥಳೀಯ ಜನರು ಸಹಾಯ ಮಾಡಿದರು ಎಂದು ತಿಳಿಸಿದರು.

ಪೊಲೀಸ್ ರಕ್ಷಣೆಯಲ್ಲಿ ಹೊರಟ ವಾಹನಗಳು

ದಾಳಿಯ ನಂತರ ಕರ್ನಾಟಕದ ವಾಹನ ಮತ್ತು ಚಾಲಕರನ್ನು ರಾಮೇಶ್ವರ ದಿಂದ 50ಕಿ.ಮೀ. ದೂರದ ರಾಮನಾಥಪುರಂಗೆ ಕರೆದುಕೊಂಡು ಬಂದು ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ಇರಿಸಲಾಗಿತ್ತು. ಕರ್ನಾಟಕಕ್ಕೆ ಹೋಗುವಾಗ ಈ ವಾಹನದ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆ ಇರುವುದರಿಂದ ಅವರನ್ನು ಅಲ್ಲೇ ಉಳಿದುಕೊಳ್ಳುವಂತೆ ಪೊಲೀಸರು ತಿಳಿಸಿದ್ದರು. ಹಾಗಾಗಿ ಮಂಜುನಾಥ್ ಕುಲಾಲ್ ಹಾಗೂ ಅದರ ಮಾಲಕ ಅಲ್ಲೇ ಉಳಿದಿದ್ದಾರೆ. ಇದೀಗ ಪೊಲೀಸರು ತಮ್ಮ ರಕ್ಷಣೆಯಲ್ಲಿ ಕರ್ನಾಟಕ ನೋಂದಣಿಯ ಆರು ವಾಹನಗಳನ್ನು 600ಕಿ.ಮೀ. ದೂರದಲ್ಲಿರುವ ಕರ್ನಾಟಕದ ಗಡಿ ತಲುಪಿಸಲು ಮುಂದಾಗಿದ್ದಾರೆ. ಅದರಂತೆ ಸಂಜೆ ವೇಳೆ ಮಂಜುನಾಥ್ ಕುಲಾಲ್ ಹಾಗೂ ಇತರರು ವಾಹನದ ಜೊತೆ ಹೊರಟಿದ್ದು, ನಾಳೆ ಮಧ್ಯಾಹ್ನ ಉಡುಪಿಗೆ ಆಗಮಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News