ಬ್ರಹ್ಮಾವರದ ಖಾಸಗಿ ಕಾಲೇಜಿನಲ್ಲಿ ‘ಗಾಂಧಿಗಿರಿ’!
ಬ್ರಹ್ಮಾವರ, ಸೆ.14: ಮುನ್ನಾಭಾಯಿ ಸರಣಿ ಚಿತ್ರ ‘ಗಾಂಧಿಗಿರಿ’ಯನ್ನು ದೇಶದಲ್ಲಿ ಜನಪ್ರಿಯಗೊಳಿಸಿದ್ದರೆ, ಇದೀಗ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ದ್ವಿಚಕ್ರ ವಾಹನಗಳಲ್ಲಿ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹೆಲ್ಮೆಟ್‌ನ ಮಹತ್ವವನ್ನು ಸಾರಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ‘ಗಾಂಧಿಗಿರಿ’ಯನ್ನು ಪ್ರಯೋಗಿಸಿದ್ದಾರೆ.
ಜೀವನ ಅತ್ಯಮೂಲ್ಯವಾಗಿದೆ ಎಂಬುದನ್ನು ಮರೆತು ಇಂದಿನ ಯುವ ಜನತೆ ತಮ್ಮ ಸುರಕ್ಷತೆಯ ಬಗ್ಗೆ ಗಮನ ಕೊಡದೇ ವಾಹನವನ್ನು ಚಲಾಯಿಸುವುದು ಇಂದು ಸಾಮಾನ್ಯವಾಗಿದೆ. ಸರಕಾರ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್‌ನ್ನು ಕಡ್ಡಾಯ ಮಾಡುವುದಕ್ಕಿಂತಲೂ ಮೊದಲೇ ಜಿಲ್ಲೆಯಲ್ಲಿ ಹಿಂದಿನ ಎಸ್ಪಿಯಾಗಿದ್ದ ಅಣ್ಣಾಮಲೈ,ಜಿಲ್ಲೆಯ ಕಾಲೇಜುಗಳಲ್ಲಿ ಹೆಲ್ಮೆಟ್ ಅಗತ್ಯತೆ ಬಗ್ಗೆ ಅನೇಕ ಜಾಗೃತಿ ಶಿಬಿರಗಳನ್ನು ನಡೆಸಿ ಕಾಲೇಜು ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದರು. ಆದರೂ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೇ ಪೊಲೀಸರ ಕಣ್ಣುತಪ್ಪಿಸಿ ಕೇವಲ ಶೋಕಿಗಾಗಿ ತಮ್ಮ ಕೈಯಲ್ಲಿ ಹೆಲ್ಮೆಟ್ ಹಿಡಿದು ಸುತ್ತಾಡುವ ಪರಿಪಾಠ ಎಲ್ಲೆಡೆ ಕಂಡುಬರುತ್ತಿದೆ. ಕಾಲೇಜು ಕ್ಯಾಂಪಸ್ ಒಳಗೆ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಿಕೊಂಡು ಬರುವ ಹಾಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಗಾಂಧಿಗಿರಿ ಪರಿಕಲ್ಪನೆ ಯನ್ನು ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಪ್ರಯತ್ನಿಸಲಾಯಿತು.
ಹೆಲ್ಮೆಟ್ ಇಲ್ಲದೆ ಅಥವಾ ಧರಿಸದೇ ಕ್ಯಾಂಪಸ್ ಒಳಗೆ ಬರುವ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಯರು ಗುಲಾಬಿ ಹೂ ನೀಡುವ ಮೂಲಕ ಮತ್ತು ಉಪನ್ಯಾಸಕರು ಈ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಧಾರಣೆ ಯಿಂದ ಜನರ ಮತ್ತು ತಮ್ಮ ಜೀವಉಳಿಸುವ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡುವುದರ ಮೂಲಕ ಈ ಗಾಂಧಿಗಿರಿ ಕಲ್ಪನೆಯನ್ನು ಜಾರಿ ಗೊಳಿಸಲಾಯಿತು. ಈ ಮೂಲಕ ಕಾಲೇಜು ಕ್ಯಾಂಪಸ್‌ಗೆ ದ್ವಿಚಕ್ರ ವಾಹನದ ಮೂಲಕ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬರುವಂತೆ ಮಾಡಲಾಯಿತು. ಈ ರೀತಿಯ ವಿಶಿಷ್ಟ ಸಂಪ್ರದಾಯದಿಂದಾದರೂ ನಮ್ಮ ಯುವಜನತೆಯಲ್ಲಿ ಜಾಗೃತಿ ಮೂಡಲಿ ಎನ್ನುವ ಈ ವಿನೂತನ ಪರಿಕಲ್ಪನೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಪ್ರೊ.ಜ್ಯೋತಿ ಅವರದ್ದಾಗಿತ್ತು.
ಈ ನೂತನ ಪರಿಕಲ್ಪನೆ ನಿಜಕ್ಕೂ ಅರ್ಥಪೂರ್ಣವಾಗಿತ್ತಲ್ಲದೇ ಇದೀಗ ಪ್ರತಿದಿನ ಕ್ಯಾಂಪಸ್ ಒಳಗೆ ಬರುವ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ಬರುತ್ತಿರುವುದು ಇದರ ಯಶಸ್ಸನ್ನು ಸಾರುತ್ತಿದೆ. ನಿಜವಾಗಿಯೂ ಇದು ಇತರರಿಗೂ ಮಾದರಿಯಾಗಿದೆ.
ಸಹಪಾಠಿಗಳು ಹಾಗೂ ಉಪನ್ಯಾಸಕರ ಕೈಗಳಿಂದ ಎಲ್ಲರ ಸಮ್ಮುಖದಲ್ಲಿ ಹೂವನ್ನು ತೆಗೆದುಕೊಳ್ಳಲು ನನಗೆ ನಾಚಿಕೆ ಆಯಿತು. ಹೆಲ್ಮೆಟ್ ಇದ್ದೂ ಧರಿಸದೇ ಇರುವುದರಿಂದ ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎನ್ನುವ ಬಗ್ಗೆ ಈಗ ಅರ್ಥ ಆಯಿತು. ನಾನು ತಪ್ಪು ಮಾಡುತ್ತಿದ್ದೇನೆ ಎಂಬುದನ್ನು ಅರಿತಿದ್ದೇನೆ ಎಂದು ಹೆಲ್ಮೆಟ್ ಧರಿಸದೇ ಬಂದ ಓರ್ವ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಿದ.
ಇಂತಹ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಹೆಮ್ಮೆ ಇದೆ. ಅವರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ನನ್ನ ಸ್ನೇಹಿತರ ಜೀವನವನ್ನು ರಕ್ಷಿಸುವ ಒಂದು ಭಾಗವಾಗಿದ್ದೇನೆ ಎಂದು ಗಾಂಧಿಗಿರಿ ಪರಿಕಲ್ಪನೆಯಲ್ಲಿ ಭಾಗವಹಿಸಿದ ಓರ್ವ ವಿದ್ಯಾರ್ಥಿನಿ ಪ್ರತಿಕ್ರಿಯೆ ನೀಡಿದರು.