ಹುಲಿವೇಷ ಹಾಕಿ 4 ಬಡ ಕುಟುಂಬಗಳಿಗೆ ಧನಸಹಾಯಗೈದ ಯುವಕರ ತಂಡ
ಉಡುಪಿ, ಸೆ.14:ಅಂಬಲಪಾಡಿಯ ಯೂತ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ 39ನೇ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಕಪ್ಪೆಟ್ಟಚು ಫ್ರೆಂಡ್ಸ್ ಹಾಗೂ ಮಲ್ಪೆ ಫ್ರೆಂಡ್ಸ್‌ನ ಯುವಕರ ತಂಡ ಹುಲಿವೇಷ ಹಾಕಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಪರಿಸರದ ನಾಲ್ಕು ಬಡ ಕುಟುಂಬಗಳಿಗೆ ಇಲ್ಲಿ ವಿತರಿಸಲಾಯಿತು.
ಮಂಗಳವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಶಶಿಧರ ಪೂಜಾರಿ ಕಿದಿಯೂರು, ಶಕುಂತಳಾ ಕಾಡಬೆಟ್ಟು, ರಾಜು ಕಪ್ಪೆಟ್ಟು ಹಾಗೂ ಅಮಿತಾ ಕುಟುಂಬಕ್ಕೆ ತಲಾ 25,000ರೂ.ಗಳ ಚೆಕ್‌ನ್ನು ಅಂಬಲಪಾಡಿಯ ಶ್ರೀನಾರಾಯಣ ಗುರುಸ್ವಾಮಿ ಭಜನಾ ಮಂಡಳಿಯ ಮೂಲಕ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ವಿತರಿಸಿದರು.
ಸಂಘಟನೆಗಳು ಇಂಥ ಸಮಾಜಮುಖಿ ಕಾರ್ಯಕ್ರಮದ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು. ಯುವಕರ ಈ ಪ್ರಯತ್ನ ಇಡೀ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದು ಡಾ.ಬಲ್ಲಾಳ್ ಶ್ಲಾಘಿಸಿದರು.
ಅಂಬಲಪಾಡಿ ಕಪ್ಪೆಟ್ಟು ನಾರಾಯಣ ಗುರುಸ್ವಾಮಿ ಭಜನಾ ಮಂಡಳಿಯ ಸುಂದರ ಕಪ್ಪೆಟ್ಟು ಮಾತನಾಡಿ, ನಮ್ಮ ಯುವಕರು ಹುಲಿವೇಷ ಹಾಕಿ ಸುಮಾರು ಎರಡು ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು. ಎಲ್ಲಾ ಖರ್ಚುಗಳನ್ನು ಕಳೆದ ಉಳಿದ ಹಣವನ್ನು ನಾಲ್ಕು ಅಶಕ್ತ ಕುಟುಂಬಗಳಿಗೆ ಹಂಚಿದ್ದೇವೆ ಎಂದರು.