×
Ad

ಮೊವಾಡಿ: ಗೋಮಾಳ ಅತಿಕ್ರಮಣ ತೆರವಿಗೆ ಕ್ರಮ

Update: 2016-09-14 23:03 IST

ಕುಂದಾಪುರ, ಸೆ.14: ತ್ರಾಸಿ ಗ್ರಾಪಂ ವ್ಯಾಪ್ತಿಯ ಮೊವಾಡಿ ಗ್ರಾಮದಲ್ಲಿ ನೂರಕ್ಕೂ ಅಧಿಕ ನಿವೇಶನ ರಹಿತ ಬಡ ದಲಿತ ಕುಟುಂಬಗಳು ಗೋಮಾಳ ಜಾಗವನ್ನು ಅತಿಕ್ರಮಿಸಿಕೊಂಡಿರುವ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಂದಾಯ ಇಲಾಖೆ ಅತಿಕ್ರಮಣ ತೆರವಿಗೆ ಮುಂದಾದರೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೂರಹಿತ ಬಡ ದಲಿತ ಕುಟುಂಬಗಳ ಬೆಂಬಲಕ್ಕೆ ನಿಂತಿದೆ.

ಮೊವಾಡಿ ಗ್ರಾಮದಲ್ಲಿರುವ ಸರಕಾರಿ ಗೋಮಾಳ ಜಾಗವನ್ನು ಬಲಾಢ್ಯರು, ಭೂಮಾಲಕರು ಅತಿಕ್ರಮಿಸಿದ್ದನ್ನು ಖಂಡಿಸಿ ನೂರಕ್ಕೂ ಅಧಿಕ ಭೂರಹಿತ ಬಡ ದಲಿತ ಕುಟುಂಬಗಳು ಈ ತಿಂಗಳ ಪ್ರಾರಂಭದಿಂದ ಸರಕಾರಿ ಜಮೀನಲ್ಲಿ ಗುಡಿಸಲುಗಳನ್ನು ಕಟ್ಟಿ ವಾಸ್ತವ್ಯ ಹೂಡಿದ್ದಾರೆ. ಇಲ್ಲೀಗ 100ಕ್ಕೂ ಅಧಿಕ ಕುಟುಂಬಗಳು 90ಕ್ಕೂ ಅಧಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿವೆ.

ಗೋಮಾಳವನ್ನು ಅತಿಕ್ರಮಿಸಿಕೊಂಡಿರುವ ಬಲಾಢ್ಯರನ್ನು ತೆರವುಗೊಳಿಸಿ, ಇಲ್ಲಿನ ನಿವೇಶನ ರಹಿತ ದಲಿತರಿಗೆ ಗ್ರಾಪಂ ನಿವೇಶನಗಳನ್ನು ಹಂಚಬೇಕು ಎಂಬುದು ಇವರ ಆಗ್ರಹವಾಗಿದೆ. ಊರಿನ ಗಣ್ಯರು ಸ್ಪಂತ ಭೂಮಿ ಹೊಂದಿದ್ದರೂ, ಗೋಮಾಳವನ್ನು ಅತಿಕ್ರಮಿಸಿಕೊಂಡು ಇದೀಗ ಅದನ್ನು ಸಕ್ರಮ ಗೊಳಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ನೂರಾರು ಮಂದಿ ದಲಿತರಿಗೆ ವಾಸಿಸಲು ಈಗಲೂ ಒಂದಿಂಚು ನೆಲವಿಲ್ಲ. ನಿವೇಶನಕ್ಕಾಗಿ ಗ್ರಾಪಂನಲ್ಲಿ ಸಲ್ಲಿಸಿದ ಅರ್ಜಿ ಧೂಳು ತಿನ್ನುತ್ತಿದೆ ಎಂದು ದಲಿತರು ದೂರಿದ್ದಾರೆ.

ಈ ದಲಿತ ಕುಟುಂಬಗಳ ಬೆಂಬಲಕ್ಕೆ ಬಂದಿರುವ ದಸಂಸ, ಗ್ರಾಮದಲ್ಲಿರುವ ವಸತಿ ರಹಿತ, ಭೂರಹಿತ ಬಡ ಕುಟುಂಬಗಳನ್ನು ಹುಡುಕಿ ನಿವೇಶನವನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ಸೇರಿ ಹಂಚಲು ಕ್ರಮಕೈಗೊಳ್ಳಬೇಕಿದ್ದ ಗ್ರಾಪಂ, ಬಡ ದಲಿತರು ಕಟ್ಟಿದ ಗುಡಿಸಲುಗಳನ್ನು ತೆರವು ಮಾಡಿಸಲು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಹೇಳಿದೆ.

ಮುದೂರಿನಲ್ಲಿ ಸರ್ವೆ ನಂಬ್ರ 63ರಲ್ಲಿ 362 ಎಕ್ರೆ ದಲಿತರಿಗೆ ಮೀಸಲಿಟ್ಟ ಭೂಮಿಯನ್ನು ಕಳೆದ ಹತ್ತು ವರ್ಷಗಳಿಂದ ಭೂಮಾಲಿಕರು ಅತಿಕ್ರಮಣ ಮಾಡಿಕೊಂಡಿದ್ದು, ಅತಿಕ್ರಮಣ ತೆರವುಗೊಳಿಸಿ ಬಡ ಜನತೆಗೆ ಭೂಮಿ ನೀಡುವಂತೆ ಕೇಳಿಕೊಂಡರೂ ಈ ತನಕ ಒತ್ತುವರಿ ತೆರವುಗೊಳಿಸದ ಕಂದಾಯ ಇಲಾಖೆ, ಮೊವಾಡಿಯಲ್ಲಿ ಬಡ ದಲಿತರು ವಾಸ್ತವ್ಯಕ್ಕೆ ಭೂಮಿಯಿಲ್ಲದೆ ತಮ್ಮ ವಾಸಕ್ಕೆ ಗುಡಿಸಲುಗಳನ್ನು ಕಟ್ಟಿಕೊಂಡಾಗ ಕಾನೂನು ಕ್ರಮ ಜರುಗಿಸಲು, ಬಡ ಕುಟುಂಬಗಳನ್ನು ತೆರವುಗೊಳಿಸಲು ಮುಂದಾಗುತ್ತಿರುವುದು ಯಾವ ನ್ಯಾಯ ಎಂದು ಅದು ಪ್ರಶ್ನಿಸಿದೆ.

ಮೊವಾಡಿಯಲ್ಲಿರುವ ಬಡ ದಲಿತರಿಗೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ಈ ಮೊದಲೇ ಭೂರಹಿತರನ್ನು ಗುರುತಿಸಿ ಭೂಮಿ ನೀಡಬೇಕಿತ್ತು. ಆದರೆ ಇಲಾಖೆಯ ನಿರ್ಲಕ್ಷದಿಂದ ಭೂರಹಿತ ಬಡ ದಲಿತ ಕುಟುಂಬಗಳು ತಮ್ಮ ಬದುಕಿಗಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಈ ಬಡಕುಟುಂಬಗಳಿಗೆ ನಿವೇಶನ ಮಂಜೂರು ಮಾಡಲು ಕ್ರಮಕೈಗೊಳ್ಳುವ ಬದಲು ಅವುಗಳನ್ನು ತೆರವುಗೊಳಿಸುವ ಬಗ್ಗೆಯೇ ಹೆಚ್ಚು ಆಸಕ್ತಿ ತೋರುತ್ತಿರುವುದು ದುರದೃಷ್ಟಕರ.
ಭೂಮಾಲಕರ ಬಗ್ಗೆ ಚಕಾರವೆತ್ತದ ಅಧಿಕಾರಿಗಳು ಬಡ ದಲಿತರ ಮೇಲೆ ಕಾನೂನು ದರ್ಪ ತೋರಿಸಲು ಮುಂದಾದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಗ್ರ ಹೋರಾಟ ನಡೆಸುವುದು ಎಂದು ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಮಂಜುನಾಥ ಗಿಳಿಯಾರು ಕುಂದಾಪುರ ಹಾಗೂ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News