ಬಸ್ಸಿಗೆ ಕಲ್ಲೆಸೆತ ಪ್ರಕರಣ: ಇಬ್ಬರ ಸೆರೆ
Update: 2016-09-14 23:06 IST
ಮಂಗಳೂರು,ಸೆ. 14: ಸೆಪ್ಟಂಬರ್ 2ರಂದು ಭಾರತ್ ಬಂದ್ ಸಂದರ್ಭದಲ್ಲಿ ನಗರದ ಕೆಎಸ್ಸಾರ್ಟಿಸಿ ಬಸ್ಸಿನಗೆ ಕಲ್ಲೆಸೆತ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಜಾಲ್ ಪಕ್ಕಲಡ್ಕದ ನಿವಾಸಿಗಳಾದ ಧೀರಜ್ (21) ಹಾಗೂ ರಾಜೇಶ್ (22) ಎಂದು ಗುರುತಿಸಲಾಗಿದೆ.
ಸೆಪ್ಟಂಬರ್ 2ರಂದು ನಡೆದ ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಸರಕಾರಿ ಬಸ್ಸಿನಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗಾಜು ಜಖಂಗೊಳಿಸಿದ್ದರು. ಈ ಬಗ್ಗೆ ಬಸ್ ಚಾಲಕ ಶಿವರಾಜ್ ಕುಮಾರ್ ಎಂಬವರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಉತ್ತರ ಠಾಣಾ ಇನ್ಸ್‌ಪೆಕ್ಟರ್ ಶಾಂತರಾಮ ಹಾಗೂ ಸಬ್ ಇನ್ಸ್‌ಪೆಕ್ಟರ್ ಮದನ ಎಂ.ಸಿ. ಅವರು ಮಂಗಳವಾರ ರಾತ್ರಿ ಪಡೀಲ್ ಬಳಿ ಇಬ್ಬರನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆ್ಯಕ್ಟಿವಾ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.