×
Ad

ನವ ವಿವಾಹಿತೆಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

Update: 2016-09-14 23:38 IST

ಪುತ್ತೂರು, ಸೆ.14: ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮರೀಲ್ ಎಂಬಲ್ಲಿ 5ವರ್ಷಗಳ ಹಿಂದೆ ನಡೆದಿದ್ದ ನವವಿವಾಹಿತೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರಿನ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಅವರನ್ನು ನೇಮಿಸಿದೆ. ಇದರಿಂದಾಗಿ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಮಾನ್ಯಡ್ಕ ನಿವಾಸಿ ಶೇಷಪ್ಪಗೌಡರ ಪುತ್ರಿ ಕುಸುಮಾ ಯಾನೆ ಶ್ವೇತಾ 2011ರ ಫೆ.16ರಂದು ಪುತ್ತೂರು ನಗರದ ಹೊರವಲಯದಲ್ಲಿರುವ ಕೆಮ್ಮಿಂಜೆ ಗ್ರಾಮದ ಮರೀಲ್ ಎಂಬಲ್ಲಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮಗಳ ಸಾವಿಗೆ ಆಕೆಯ ಪತಿ ಮೋಹನ ಗೌಡ ವರದಕ್ಷಿಣೆಗಾಗಿ ಪೀಡಿಸಿ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳವೇ ಕಾರಣ ಎಂದು ಆರೋಪಿಸಿ ಶೇಷಪ್ಪ ಗೌಡ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋಹನ ಗೌಡನನ್ನು ಬಂಧಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
  ಮೋಹನ ಗೌಡ ಬಳಿಕ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಆದರೆ ಬಳಿಕ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ನ್ಯಾಯಾಲಯದ ಆದೇಶದಂತೆ ಪೊಲೀಸರು ತಲೆಮರೆಸಿಕೊಂಡಿದ್ದ ಆತನನ್ನು ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮೋಹನ ಗೌಡ ಆ ಬಳಿಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಅದಾದ ಬಳಿಕ ಹೈಕೋರ್ಟಿನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದ ಮೋಹನ ಬಳಿಕ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಮೂರನೆ ಬಾರಿಗೆ ಬಲೆ ಬೀಸಿದ್ದಾರೆ.
 ಇದೀಗ ಈ ಪ್ರಕರಣದ ವಿಚಾರಣೆ ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವರನ್ನು ನಿಯೋಜನೆಗೊಳಿಸಿದೆ. ಪುತ್ತೂರಿನ ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿರುವ ಶಿವಪ್ರಸಾದ್ ಆಳ್ವ ಈ ಹಿಂದೆ ಸಹಾಯಕ ಸರಕಾರಿ ಅಭಿಯೋಜಕರಾಗಿ, ಬಳಿಕ ಸರಕಾರಿ ಅಭಿಯೋಜಕರಾಗಿ ಪುತ್ತೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಅವರು ಮಂಗಳೂರಿನಲ್ಲಿ ಹಿರಿಯ ಕಾನೂನು ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಹಲವಾರು ವಿಶೇಷ ಪ್ರಕರಣಗಳಲ್ಲಿ ಸಮರ್ಥವಾಗಿ ವಾದಮಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಯಾಗಲು ಕಾರಣರಾಗಿರುವ ಶಿವಪ್ರಸಾದ್ ಆಳ್ವರನ್ನು ಈ ಪ್ರಕರಣದಲ್ಲಿ ವಾದಿಸಲು ಸರಕಾರ ನಿಯೋಜಿಸಿರುವುದರಿಂದ ಈ ಆತ್ಮಹತ್ಯೆ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News