×
Ad

ಡೇವಿಸ್ ಕಪ್‌ನಲ್ಲಿ ಈ ಭಾರತೀಯ ಟೆನಿಸ್ ಆಟಗಾರನಿಗೆ ನಿಶ್ಚಿತಾರ್ಥ

Update: 2016-09-15 09:00 IST

ಹೊಸದಿಲ್ಲಿ, ಸೆ.15: ಡೇವಿಸ್ ಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತದ ಟೆನಿಸ್ ಪ್ರತಿಭೆ ಸಾಕೇತ್ ಮೈನೇನಿ ತಮ್ಮ ಸ್ನೇಹಿತೆ ಶ್ರೀಲಕ್ಷ್ಮಿ ಅನುಮೋಲ್ ಅವರಿಗೆ ವಿವಾಹ ಪ್ರಸ್ತಾವ ನಿವೇದಿಸಿಕೊಂಡ ಅಪರೂಪದ ಘಟನೆಗೆ ಬುಧವಾರ ನಡೆದ ಡೇವಿಸ್ ಕಪ್ ಔತಣಕೂಟ ಸಾಕ್ಷಿಯಾಯಿತು. ಯುಪಿಎಸ್‌ಸಿ ಆಕಾಂಕ್ಷಿಯಾಗಿರುವ ಶ್ರೀಲಕ್ಷ್ಮಿ  ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದರು.
"ಡೇವಿಸ್ ಕಪ್ ಪಂದ್ಯಾವಳಿ ವೇಳೆ ಇಂಥ ಪ್ರಸ್ತಾವ ಮುಂದಿಟ್ಟಿರುವುದು ಇದೇ ಮೊದಲು" ಎಂದು ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೇಳಿದ್ದಾರೆ. ಈ ಅಪರೂಪದ ಘಟನೆ ಹಿನ್ನೆಲೆಯಲ್ಲಿ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್, ನಿಶ್ಚಿತಾರ್ಥಕ್ಕೆ ಕೇಕ್ ಸಿದ್ಧಪಡಿಸಿತ್ತು.
ಭಾರತದ ಡೇವಿಸ್‌ಕಪ್ ಪ್ಲೇ ಆಫ್ ಪಂದ್ಯದ ಸಿಂಗಲ್ಸ್ ಸ್ಪರ್ಧೆಗೆ ಆಯ್ಕೆಯಾದ ಇಬ್ಬರು ಟೆನಿಸ್ ಪ್ರತಿಭೆಗಳ ಪೈಕಿ ಮೈನೇನಿ ಒಬ್ಬರು. 119ನೇ ರ್ಯಾಂಕಿಂಗ್ ಹೊಂದಿರುವ ಮೈನೇನಿ ಇತ್ತೀಚೆಗೆ ಯುಎಸ್ ಓಪನ್‌ನಲ್ಲಿ ಭಾಗವಹಿಸುವ ಮೂಲಕ ಚೊಚ್ಚಲ ಗ್ರಾಂಡ್‌ಸ್ಲಾಂ ಆಡಿದ್ದರು. ಅರ್ಹತಾ ಸುತ್ತಿನ ಪಂದ್ಯ ಜಯಿಸಿ ಮುಖ್ಯ ಸುತ್ತಿಗೆ ಮೈನೇನಿ ಅರ್ಹರಾಗಿದ್ದರು. 28 ವರ್ಷದ ವಿಶಾಖಪಟ್ಟಣಂ ಮೂಲದ ಮೈನೇನಿ, ಮೊದಲ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಜಿರಿ ವೆಸ್ಲಿ ವಿರುದ್ಧ ಕಠಿಣ ಹೋರಾಟ ನೀಡಿದ್ದರು. ಐದನೇ ಸೆಟ್‌ನಲ್ಲಿ 5-7 ಅಂಕದಿಂದ ಸೋಲುವ ಮೂಲಕ ಕೂಟದಿಂದ ಹೊರಬಿದ್ದಿದ್ದರು. ವೆಸ್ಲಿ ತಮ್ಮ ಎರಡನೆ ಸುತ್ತಿನಲ್ಲಿ ವಿಶ್ವದ ಅಗ್ರ ಕ್ರಮಾಂಕದ ನೊವಾಕ್ ಜೊಕೊವಿಕ್ ವಿರುದ್ಧದ ಪಂದ್ಯದಲ್ಲಿ ಭುಜದ ನೋವಿನ ಕಾರಣದಿಂದ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News