ಕಾವೇರಿ ಜಲವಿವಾದ: ಸುಪ್ರೀಂ ಆದೇಶ ಪಾಲನೆ ಅನಿವಾರ್ಯ; ಸಚಿವ ರಮೇಶ್‌ಕುಮಾರ್

Update: 2016-09-15 05:53 GMT

ಮಂಗಳೂರು, ಸೆ.15: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಸರಕಾರ ಏನೂ ಮಾಡುವಂತಿಲ್ಲ. ಸರಕಾರ ಈ ಆದೇಶವನ್ನು ಪಾಲನೆ ಮಾಡುವ ಕಾರ್ಯವನ್ನಷ್ಟೇ ಮಾಡಿದೆ ಎಂದು ರಾಜ್ಯ ಆರೋಗ್ಯ ಸಚಿವ ರಮೇಶ್‌ಕುಮಾರ್ ಹೇಳಿದ್ದಾರೆ.
ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿ ಮಂಗಳೂರಿಗೆ ಆಗಮಿಸಿದ ಅವರು ಆಹಾರ ಸಚಿವ ಯು.ಟಿ.ಖಾದರ್ ಅವರ ಮನೆಯಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಭುಗಿಲೆದ್ದಿರುವ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಂತಿಮ. ಹಾಗಿರುವಾಗ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪಾಲನೆ ಅನಿವಾರ್ಯ. ಹಾಗಂತ ನ್ಯಾಯಾಲಯದ ಈ ತೀರ್ಪು ಅಂತಿಮವೇನೂ ಅಲ್ಲ. ಇದು ಮಧ್ಯಂತರ ತೀರ್ಪು ಆಗಿದ್ದು, ಸೆ.20ರಂದು ಮತ್ತೆ ವಿಚಾರಣೆ ನಡೆಯಲಿದೆ. ಆಗ ಕರ್ನಾಟಕದ ಪರವಾಗಿ ತೀರ್ಪು ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

# ಹೊಸ ಆರೋಗ್ಯ ನೀತಿ ಜಾರಿಗೆ ಚಿಂತನೆ
 ಇತ್ತೀಚೆಗೆ ಜಾರಿಗೆ ಬಂದಿರುವ ಹರೀಶ್ ಸಾಂತ್ವಾನ ಯೋಜನೆ ವಿಫಲವಾಗುತ್ತಿರುವಂತೆ ಕಾಣುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪತ್ರಿಕ್ರಿಯಿಸಿದ ಆರೋಗ್ಯ ಸಚಿವರು, ಸರಕಾರದ ಯಾವುದೇ ಯೋಜನೆ ವಿಫಲವಾಗುವುದಿಲ್ಲ. ಆದರೆ ಅವುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸರಕಾರಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆತಾಗ ಅದು ಯಶಸ್ವಿಯಾಗಲು ಸಾಧ್ಯ, ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅದು ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಈ ನಿಟ್ಟನಲ್ಲಿ ಹೊಸ ಆರೋಗ್ಯ ನೀತಿಯನ್ನು ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ ಎಂದರು.
ಈ ಸಂದರ್ಭ ಸಚಿವರೊಂದಿಗೆ ಆಹಾರ ಸಚಿವ ಯು.ಟಿ.ಖಾದರ್, ಮುಖ್ಯ ಸಚೇತಕ ಐವಮ್ ಡಿಸೋಜ, ಶಾಸಕ ಜೆ.ಆರ್.ಲೋಬೊ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News