×
Ad

ಖಾಸಗಿ ಆಸ್ಪತ್ರೆಗಳ ಸುಲಿಗೆ ಧೋರಣೆಗೆ ಆರೋಗ್ಯ ಸಚಿವರ ಛೀಮಾರಿ

Update: 2016-09-15 12:07 IST

ಮಂಗಳೂರು, ಸೆ.15: ‘‘ರೋಗಿ ಮೃತಪಟ್ಟ ನಂತರವೂ ವೆಂಟಿಲೇಟರ್‌ನಲ್ಲಿ ಇಡುವ, ಅಗತ್ಯವಿಲ್ಲದಿದ್ದರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಪ್ರಕ್ರಿಯೆ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ವೈದ್ಯರು, ಖಾಸಗಿ ಆಸ್ಪತ್ರೆಯವರು ವಸೂಲಿ ಮಾಡುವ ಅಧಿಕ ದರವನ್ನು ನಿಯಂತ್ರಿಸುವ ದರ ಪಟ್ಟಿ ನಮ್ಮಲ್ಲಿಲ್ಲ. ಖಾಸಗಿ ಆಸ್ಪತ್ರೆಗಳು ಅಸಹಾಯಕ ಸ್ಥಿತಿಯಲ್ಲಿ ಬರುವವರಿಗೆ ದೇವಾಲಯವಾಗಬೇಕು, ನರಕವಾಗಬಾರದು....’’ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಛೀಮಾರಿ ಹಾಕಿದ್ದು ಹೀಗೆ.
 ಮಂಗಳೂರಿನಲ್ಲಿಂದು ನಡೆದ ಖಾಸಗಿ ಆಸ್ಪತ್ರೆಯೊಂದರ ಕಾರ್ಯಕ್ರಮವೊಂದರಲ್ಲೇ ಖಾಸಗಿ ಆಸ್ಪತ್ರೆಗಳ ಅಮಾನವೀಯ ವೈದ್ಯಕೀಯ ಸೇವೆ ಕುರಿತಂತೆ ಅವರು ಆಕ್ರೋಶಿತರಾದರು.

ಮತ್ತೆ ಮಾತು ಮುಂದುವರಿಸಿದ ಅವರು, ವೃತ್ತಿಪರ ನೀತಿ ಸಂಹಿತೆಯನ್ನು ಮರೆತುಬಿಟ್ಟರೆ ವೈದ್ಯರಿರಿಗೆ ಶಿಕ್ಷೆ ನೀಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಆಸ್ಪತ್ರೆಗೆ ಬರುವ ವ್ಯಕ್ತಿಯ ಹಿನ್ನೆಲೆ, ಅಂತಸ್ತು ನೋಡಿ ಚಿಕಿತ್ಸೆ ಕೊಡುವುದನ್ನು ಬಿಟ್ಟು, ಜನರ ಖಾಯಿಲೆಗೆ ತಕ್ಕಂತಹ ಚಿಕಿತ್ಸೆ ನೀಡಲು ಮುಂದಾಗಬೇೀಕು. ರೋಗಿಗಳಲ್ಲಿ ಮನುಷ್ಯತ್ವೆ ಕಾಣದೆ ಇರುವವರು ಎಂಬಿಬಿಎಸ್ ಮಾಡಿದರೂ ವೈದ್ಯರಾಗಲು ಸಾಧ್ಯವಿಲ್ಲ ಎಂದರು. ಬಡಜನರ ತೆರಿಗೆ ಹಣವನ್ನು ಉಪಯೋಗಿಸಿಕೊಂಡು ರಚಿಸಲಾದ ಮೆಡಿಕಲ್ ಕಾಲೇಜುಗಳಲ್ಲಿ ಕಲಿತು ವೈದ್ಯರಾದವರು ಹಳ್ಳಿಗಳಲ್ಲಿ ಕೆಲಸ ಸೇವೆ ಸಲ್ಲಿಸಲುಮುಂದಾಗದೆ ಕೇವಲ ನಗರದಲ್ಲಿ ಕೆಲಸ ಮಾಡುತ್ತಾರೆ. ವಿದ್ಯೆಯನ್ನು ಹಳ್ಳಿಯ ಜನರು ಕಟ್ಟಿದ ತೆರಿಗೆಯಲ್ಲಿ ಕಲಿಯಬೇಕು, ಆದರೆ ಸೇವೆ ನೀಡುವಾಗ ಮಾತ್ರ ಈ ಜನರು ಬೇಡ ಎಂಬುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಜನರು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೆ ಪ್ರಾಣದ ಆಸೆಯಿಂದ ಖಾಸಗಿ ಆಸ್ಪತ್ರೆಗೆ ಹೋದರೆ ಅಲ್ಲಿ ದುಬಾರಿ ಶುಲ್ಕವನ್ನು ವಸೂಲು ಮಾಡುವ ಮೂಲಕ ಗುಣಮುಖವಾಗುವ ರೋಗಿಯ ಕುಟುಂಬವನ್ನು ಹೈರಾಣ ಮಾಡಲಾಗುತ್ತದೆ ಎಂದು ಅವರು ಹೇಳಿದರು.
 ವೈದ್ಯರಾಗಿ ಸೇವೆ ಸಲ್ಲಿಸುವ ಮೊದಲು ತೆಗೆದುಕೊಳ್ಳುವ ಪ್ರಮಾಣ ವಚನವನ್ನು ವೈದ್ಯರು ದಿನಂಪ್ರತಿ ತೆಗೆದು ನೋಡಬೇಕು. ರಾಜಕಾರಣಿಗಳು ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ತೆಗೆದುಕೊಳ್ಳುವ ಪ್ರಮಾಣ ವಚನವನ್ನು ಮರೆತುಬಿಟ್ಟಂತೆ ವೈದ್ಯರು ಮರೆತರೆ ಅವರಿಗೂ ಮತ್ತು ರಾಜಕಾರಣಿಗಳಿಗೆ ವ್ಯತ್ಯಾಸ ಏನಿದೆ ಎಂದು ಪ್ರಶ್ನಿಸಿದರು.
ಜನರು ಖಾಯಿಲೆ ಬಂದರೆ ಕುಸಿದು ಹೋಗುವ ಪರಿಸ್ಥಿತಿ ನಿವಾರಣೆ ಆಗಲು ಖಾಸಗಿ ಆಸ್ಪತ್ರೆಗಳು, ವೈದ್ಯರುಗಳು ಕಾರ್ಯೋನ್ಮುಖವಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News