ಸರಕಾರಿ ಜಮೀನನಲ್ಲಿ ಅನಧಿಕೃತ ವಾಸ್ತವ್ಯ ಪ್ರಕರಣ: ಡಿಸೆಂಬರ್‌ನೊಳಗೆ ವಿಲೇಗೆ ಸಚಿವ ಕಾಗೋಡು ತಾಕೀತು
ಮಂಗಳೂರು, ಸೆ.15: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವಾಸವಿದ್ದು, 94ಎ ಮತ್ತು 94ಬಿಗಳಡಿ ನಮೂನೆ 50 ಮತ್ತು ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ ಬಾಕಿ ಇರುವ ಪ್ರಕರಣಗಳನ್ನು ಡಿಸೆಂಬರ್ ಅಂತ್ಯದೊಳಗೆ ವಿಲೇ ಮಾಡುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಅನಾದಿ ಕಾಲದಿಂದಲೂ ಸರಕಾರಿ ಜಮೀನಲ್ಲಿ ಅನಧಿಕೃತವಾಗಿ ವಾಸ್ತವ್ಯ, ಕೃಷಿ ಅಥವಾ ಇತರ ಚಟುವಟಿಕೆಗಳನ್ನು ನಡೆಸುತ್ತಿರುವವರು 94ಎ ಮತ್ತು 94 ಬಿಯಡಿ ನೀಡಿರುವ ಅರ್ಜಿಗಳನ್ನು ಸಕ್ರಮಗೊಳಿಸಿ ವಿಲೇ ಮಾಡಲು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರರು ವಾರಕ್ಕೊಮ್ಮೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕು. ಮೇಲಧಿಕಾರಿಗಳು ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು. ಆಯಾ ತಾಲೂಕುಗಳಲ್ಲಿ ಡಿಸೆಂಬರ್‌ನೊಳಗೆ ಈ ಕಾರ್ಯವನ್ನು ಪೂರೈಸದ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳನ್ನು ಎತ್ತಂಗಡಿ ಮಾಡುವುದಾಗಿ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದರು. ಈ ವೇಳೆ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಜಿಲ್ಲೆಯಲ್ಲಿ 94ಎ ಯಡಿ ಒಟ್ಟು 2,50,805 ಎಕರೆ ಭೂಮಿಗೆ ಸಂಬಂಧಿಸಿ ಒಟ್ಟು 1,13,730 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 59,624 ಎಕರೆ ಭೂಮಿಯ 46,141 ಅರ್ಜಿಗಳು ವಿಲೇ ಆಗಿವೆ. 64,905 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು 94ಬಿಯಡಿ ಒಟ್ಟು 2,32,183 ಎಕರೆ ವಿಸ್ತೀರ್ಣದ ಭೂಮಿಗೆ ಸಂಬಂಧಿಸಿ 1,11,387 ಅರ್ಜಿಗಳು ಸ್ವೀಕೃತವಾಗಿದ್ದು, 37,705 ಎಕರೆ ವಿಸ್ತೀರ್ಣದ ಭೂಮಿಯಲ್ಲಿನ 28,571 ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ. 56,777 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಅವರು ಮಾಹಿತಿ ನೀಡಿದರು.
94ಸಿ, 94ಸಿಸಿಯಡಿ ಅಧಿಕಾರಿಗಳೇ ಅರ್ಜಿ ಪಡೆಯಲು ಸೂಚನೆ
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡು ವಾಸ್ತವ್ಯವಿರುವವರು 94ಸಿ (ಗ್ರಾಮಾಂತರ) ಹಾಗೂ 94ಸಿಸಿ(ನಗರ)ಯಡಿ ಅರ್ಜಿ ಸಲ್ಲಿಸಲು ಬಾಕಿ ಇದ್ದಲ್ಲಿ ತಹಶೀಲ್ದಾರರ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಮುಂದೆ ನಿಂತು ಅರ್ಜಿ ಪಡೆಯುವ ಕಾರ್ಯ ಮಾಡಬೇಕು. ಬಳಿಕ ಆ ಅರ್ಜಿಗಳನ್ನು ಸಕ್ರಮಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು. ದ.ಕ. ಜಿಲ್ಲೆಯಲ್ಲಿ 94 ಸಿಯಡಿ ಈವರೆಗೆ 59,920 ಅರ್ಜಿಗಳು ಸ್ವೀಕೃತವಾಗಿದ್ದು, 11,418 ಅರ್ಜಿಗಳು ಮಂಜೂರಾಗಿವೆ. 14,466 ಅರ್ಜಿಗಳು ತಿರಸ್ಕೃತಗೊಂಡಿವೆ. 34,036 ಅರ್ಜಿಗಳು ವಿಲೇಗಾ ಬಾಕಿ ಇದ್ದು, 11110 ಹಕ್ಕುಪತ್ರಗಳನ್ನು ನೀಡಲಾಗಿದೆ. 94 ಸಿಸಿಯಡಿ 21841 ಅರ್ಜಿಗಳು ಸ್ವೀಕೃತಗೊಂಡಿದ್ದು, 135 ಅರ್ಜಿಗಳು ಮಂಜೂರಾಗಿವೆ. 12 ಅರ್ಜಿಗಳು ತಿರಸ್ಕೃತಗೊಂಡಿದ್ದು, 21694 ಅರ್ಜಿಗಳು ವಿಲೇ ಆಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ ಮೊಯ್ದೀನ್ ಬಾವಾ ಉಪಸ್ಥಿತರಿದ್ದರು