ಯೆನೆಪೊಯ ವಿ.ವಿ.ಯಲ್ಲಿ ‘ಆದಾಯ ಘೋಷಣೆ ಮಾಹಿತಿ ಶಿಬಿರ’
ಮಂಗಳೂರು,ಸೆ.15‘ ‘ಆದಾಯ ಘೋಷಣೆ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಸರಕಾರದ ವಿವಿಧ ಯೋಜನೆಗಳು ಸುಸೂತ್ರವಾಗಿ ನಡೆಯುವಂತಾಗಲು ಸಾರ್ವಜನಿಕರು ಕೊಡುಗೆ ನೀಡಬಹುದಾಗಿದೆ. ಇದರಿಂದ ವೈಯಕ್ತಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ನರೋತ್ತಮ ಮಿಶ್ರಾ ತಿಳಿಸಿದ್ದಾರೆ.
ಅವರು ಇಂದು ದೇರಳಕಟ್ಟೆ ಯೆನೆಪೊಯ ವಿಶ್ವ ವಿದ್ಯಾನಿಲಯದ ದಂತ ವೈದ್ಯ ಕಾಲೇಜಿನಲ್ಲಿ ಮಂಗಳೂರು ಆದಾಯ ತೆರಿಗೆ ಇಲಾಖೆ ಹಾಗೂ ಯೆನೆಪೊಯ ವಿಶ್ವವಿದ್ಯಾನಿಲಯದ ಜಂಟಿ ಸಹಯೋಗದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಈ ಯೋಜನೆಯ ಪ್ರಕಾರ ಅಘೋಷಿತವಾಗಿ ಸಂಪತ್ತನ್ನು ಹೊಂದಿರುವವರು (ಆಭರಣಗಳು ಸೇರಿದಂತೆ )ದಂಡ ಪಾವತಿಸಿ ತಮ್ಮ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಯೊಳಗೆ ಸೇರಿಸಿ ಅಧಿಕೃತಗೊಳಿಸಬಹುದಾಗಿದೆ. ಈ ಘೋಷಣೆಯನ್ನು 2016ರ ಜೂನ್1ರಿಂದ 2016ರ ಸೆಪ್ಟೆಂಬರ್ 30ರೊಳಗೆ ಘೋಷಿಸಿಕೊಳ್ಳಬೇಕಾಗುತ್ತದೆ. ಆದರೆ ಈ ರೀತಿ ದಂಡ ಪಾವತಿಸಿದ ಘೋಷಿತ ಆದಾಯಕ್ಕೆ ಆದಾಯ ತೆರಿಗೆ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗುತ್ತದೆ. ಘೋಷಿತ ಸಂಪತ್ತಿನ ಬಗ್ಗೆ ಆದಾಯ ತೆರಿಗೆ ಕಾನೂನಿನ ಪ್ರಕಾರ ಯಾವೂದೇ ವಿಚಾರಣೆಯನ್ನು ಮಾಡಲಾಗುವುದಿಲ್ಲ ಆದುದರಿಂದ ಹಲವು ವರ್ಷಗಳ ಹಿಂದಿನಿಂದ ಗುಪ್ತವಾಗಿಟ್ಟ ಸಂಪತ್ತನ್ನು ಅಧಿಕೃತವಾಗಿ ಬಳಸಬಹುದಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೂ ಆದಾಯ ದೊರೆಯುತ್ತದೆ. ವೈದ್ಯರು ಸೇರಿದಂತೆ ಕೆಲವು ವೃತ್ತಿಪರರು ತಮ್ಮ ಕೆಲಸದ ಒತ್ತಡದ ನಡುವೆ ಕಾಲ ಕಾಲಕ್ಕೆ ಆದಾಯ ಘೊಷಣೆ ಮಾಡಲು ಸಾಧ್ಯವಾಗದೆ ಸಂಪತ್ತನ್ನು ಬಚ್ಚಿಟ್ಟು ಸಮಸ್ಯೆಗಳನ್ನೆದುರಿಸುತ್ತಿರುವವರಿಗೆ ಸರಕಾರದ ಈ ಹೊಸ ಯೋಜನೆಯಿಂದ ಅನುಕೂಲವಾಗಲಿದೆ. ಘೋಷಿತ ಆದಾಯದ ಮೇಲಿನ ದಂಡ ಪಾವತಿಸಲು 2017ರ ಸೆ.30ರವೆರೆಗೆ ಮೂರು ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ ಎಂದು ನರೋತ್ತಮ ಶರ್ಮ ತಿಳಿಸಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಆರ್ಥಿಕ ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೊಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಶ್ರೀಕುಮಾರ್ ಮೆನನ್ ಸ್ವಾಗತಿಸಿದರು.ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಚಂದ್ರ ಕುಮಾರ್,ಚಾರ್ಟೆಡ್ ಎಕೌಂಟೆಂಟ್ ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೆ.ಶ್ರೀಪತಿ ರಾವ್ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಮುಹಮ್ಮದ್ ಬಾವ ವಂದಿಸಿದರು. ಡಾ.ಆಶ್ವಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.