ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ.ಮೊಹಿದಿನ್‌ರಿಗೆ ಪೌರಸನ್ಮಾನ

Update: 2016-09-15 13:39 GMT

ಮಂಗಳೂರು, ಸೆ.15: ಕರ್ನಾಟಕ ಸರಕಾರದಿಂದ ದೇವರಾಜ ಅರಸು ಪ್ರಶಸ್ತಿ ಪಡೆದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರಿಗೆ ಇಂದು  ನಗರದ ಪುರಭವನದಲ್ಲಿ ಬಿ.ಎ. ಮೊಹಿದೀನ್ ಪೌರ ಸನ್ಮಾನ ಸಮಿತಿಯಿಂದ ಪೌರ ಸನ್ಮಾನ ನಡೆಯಿತು.

ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣಗೈದ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ಬಿ.ಎ ಮೊಹಿದೀನ್ ಅವರು ಭಟ್ಟಂಗಿತನ, ಲಾಟರಿಯಿಂದ, ಯಾವುದೆ ಕೃಪೆ, ಮುಲಾಜಿನಿಂದ ರಾಜಕಾರಣ ಮಾಡದೆ ಪರಿಶುದ್ದತೆಯಿಂದ ರಾಜಕಾರಣ ಮಾಡಿದ್ದರು. ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ  ಅಪಾರ ನಂಬಿಕೆಯನ್ನು ಹೊಂದಿದ್ದರು. ಕೋಮು ಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರ ನಿಲುವು ಎಲ್ಲಾ ಧರ್ಮಿಯರ ಮೆಚ್ಚುಗೆಗೂ ಪಾತ್ರವಾಗಿತ್ತು. ವೈಯಕ್ತಿಕವಾಗಿ ನನ್ನ ದೊಡ್ಡ ಣ್ಣನಿಗೆ ನೀಡುವ ಗೌರವದಷ್ಟೆ  ಬಿ.ಎ.ಮೊಹಿದೀನ್ ಅವರಿಗೆ ಗೌರವ ನೀಡುತ್ತೇನೆ. ಬಿ.ಎ.ಮೊಹಿದೀನ್ ಅವರು ಅರಸು ಅವರು ಬೋರ್ಡ್ ಅಧ್ಯಕ್ಷ ಸ್ಥಾನ ಕೊಡುವಾಗ ನಿರಾಕರಿಸಿದವರು. ಸಚಿವ ಸ್ಥಾನ ಬಂದಾಗಲೂ ನಿರಾಕರಣೆ ಮಾಡಿದ್ದರು.  ಇಂದಿರಾ ಗಾಂಧಿ ಅವರ ಉಪಚುನಾವಣೆಯ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರವನ್ನು ಕಟ್ಟುನಿಟ್ಟಾಗಿ ನೋಡಿದವರು ಎಂದರು.

ಕಾಂಗ್ರೆಸ್ ಇಬ್ಬಾಗವಾಗುವ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರಿಗೆ  ಪಕ್ಷದಲ್ಲಿ ಉಳಿಯುವ ವಚನ ಕೊಟ್ಟರು. ದೇವರಾಜ ಅರಸು ಅವರೊಂದಿಗೆ ಉಳಿದವರು ನಾನು ಮತ್ತು ಮೊಹಿದೀನ್ ಅವರು. ಅರಸು ಅವರನ್ನು ಹಲವಾರು ಮಂದಿ‌ ಭ್ರಷ್ಟ ಎಂದು ಅಪಪ್ರಚಾರ ಮಾಡಿದ್ದಾರೆ. ಆದರೆ ಈಗ ಇರುವ ಪ್ರಾಮಾಣಿಕರಷ್ಟು ಅರಸು ಪ್ರಾಮಾಣಿಕರಾಗಿರಲಿಲ್ಲ ಎಂದು ಲೇವಡಿ ಮಾಡಿದರು.

ಪಟೇಲ್ ಅವರು ತಮ್ಮ ಸಚಿವ ಸಂಪುಟದಲ್ಲಿ ಇದ್ದರೆ ಗೌರವ ಎಂದು ಅವರಿಗೆ ಸಚಿವ ಸ್ಥಾನ ನೀಡಿದರು. ಅರಸು ಅವರಿಗೆ ರಾಜಕೀಯ ವಾರಸುದಾರರಿಲ್ಲ. ಅವರು ಯಾರನ್ನೂ ಬೆಳೆಸಿಲ್ಲ. ಅವರ ಆಲೋಚನೆಗಳಿಗೆ ಬದ್ಧತೆಯಿಂದ ಕೆಲಸ  ಮಾಡಿದವರು ಅವರ ವಾರಸುದಾರರು‌. ರಾಜ್ಯದಲ್ಲಿ ಹೆಚ್ಚು ಶಿಕ್ಷಿತರಿರುವ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಆದರೆ ಶೈಕ್ಷಣಿಕ ಅಭಿವೃದ್ಧಿ ಹೊಂದಿದ ಈ ಜಿಲ್ಲೆಯಲ್ಲಿ ಅನಾಗರಿಕ ಕೆಲಸ ನಡೆಯುತ್ತಿದೆ. ನಾಗರಿಕ ಸಮಾಜದ ಪ್ರಕಾರ ನಡೆಯುತ್ತಿಲ್ಲ. ಇಲ್ಲಿನ ಜನರು ನಾಗರಿಕರಾಗಿ ಬದುಕುವಂತಾಗಬೇಕು ಎಂದರು.

ಮನುಷ್ಯ ಮನುಷ್ಯ ನಡುವೆ ಗೋಡೆ ಕಟ್ಟದೆ, ಮನುಷ್ಯ ರಕ್ತ ಹರಿಸದೆ, ಮಕ್ಕಳು ಜೊತೆ ಜೊತೆ ಯಾಗಿ ಹೋಗುವುದಕ್ಕೆ ಅಡ್ಡಿಪಡಿಸದೆ ಸ್ವಾರ್ಥಕ್ಕಾಗಿ ಬೆಂಕಿ ಹಚ್ಚಬಾರದು‌‌. ಇಲ್ಲಿನ  ಜನರು ಬೆಳಕು ಹಚ್ವುವಂತಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ  ಬಿ.ಎ.ಮೊಹಿದಿನ್ ಅವರು ಮಾತನಾಡಿದರು .

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ ಎಂ ವಹಿಸಿದ್ದರು. ದ.ಕ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕ ಅಹಮ್ಮದ್ ಮುಸ್ಲಿಯಾರ್, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯ ಶ್ರೇಷ್ಠ ಧರ್ಮಗುರು ರೆ.ಫಾ ಡೆನಿಸ್ ಮೊರಾಸ್ ವಿಶೇಷ ಆಹ್ವಾನಿತರಾಗಿದ್ದರು‌.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಮುಖ್ಯ ಮಂತ್ರಿ ಸಲಹೆಗಾರ  ದಿನೇಶ್ ಅಮೀನ್ ಮಟ್ಟು  ಅವರು ಶುಭ ಹಾರೈಸಿ ಮಾತನಾಡಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ನಿರ್ಮಾಣವಾದ ಬಿ.ಎ.ಮೊಹಿದಿನ್ ಅವರ ಜೀವನ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ  ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಅಭಯಚಂದ್ರ‌ ಜೈನ್, ಜಯಪ್ರಕಾಶ್ ಹೆಗ್ಡೆ,  ಅಮರನಾಥ ಶೆಟ್ಟಿ, ಶಾಸಕ ಮೊಯ್ದಿನ್ ಬಾವ , ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಉಪಸಭಾಪತಿ ಎನ್.ಯೋಗೀಶ್ ಭಟ್, ಮಾಜಿ ಮುಖ್ಯ ಸಚೇತಕ  ಮುಹಮ್ಮದ್ ಮಸೂದ್ , ಮಾಜಿ ಶಾಸಕ  ಗೋಪಾಲ ಭಂಡಾರಿ, ದ.ಕ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಮಂಗಳೂರು ಪೊಲೀಸ್ ಕಮೀಷನರ್ ಎಂ‌. ಚಂದ್ರಶೇಖರ್, ಯೆನೆಪೊಯ ವಿಶ್ವವಿದ್ಯಾನಿಲಯ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ, ಎ.ಜೆ.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, , ಕಣಚೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆಯ ಅಧ್ಯಕ್ಷ ಯು.ಕೆ. ಮೋನು, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಗಣೇಶ್ ರಾವ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಬಿ.ಎ.ಮೊಹಮ್ಮದ್ ಹನೀಪ್,  ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ದ.ಕ ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕೆ‌ ಸೀತಾರಾಮ ರೈ, ಸಿಪಿಎಂ ಕಾರ್ಯದರ್ಶಿ ವಸಂತ ಆಚಾರಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು, ರಾಮಕೃಷ್ಣ ಪ್ರೌಡಶಾಲೆ ಪುತ್ತೂರು ಸಂಚಾಲಕ ಕಾವು ಹೇಮನಾಥ ಶೆಟ್ಟಿ  ಪುತ್ತೂರು, ಪೌರ ಸನ್ಮಾನ ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ಕೆ.ಎಂ ಮುಸ್ತಫಾ ಸುಳ್ಯ,  ಸಂಚಾಲಕ ಎಸ್ ಎಂ ರಶೀದ್ ಹಾಜಿ, ಕಾರ್ಯಕ್ರಮ ಸಂಚಾಲಕ  ಲಾರೆನ್ಸ್  ಡಿಸೋಜ, ಶಾರದ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಎಂ‌ .ಬಿ.ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಎಡಪದವು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  

                     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News