ವಿಟ್ಲ: ಕುಡಿದ ಮತ್ತಿನಲ್ಲಿ ಜಗಳವಾಡಿ ಪೊಲೀಸರಿಗೆ ಸಿಕ್ಕಿಬಿದ್ದ ತಲೆಮರೆಸಿಕೊಂಡಿದ್ದ ರೌಡಿಶೀಟರ್
ಬಂಟ್ವಾಳ, ಸೆ. 15: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬಾರೊಂದರ ಎದುರು ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಪೊಲೀಸರು ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಸಹಿತ ಇಬ್ಬರನ್ನು ಬಂಧಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಅಳಿಕೆ ಗ್ರಾಮದ ಎರುಂಬು ನಿವಾಸಿ ನಂದಪ್ಪ ಎಂಬವರ ಪುತ್ರ ಗುರುರಾಜ್ ಬಳ್ಳಾಲ್ (31) ಹಾಗೂ ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ಲಕ್ಷ್ಮಣ ಭಂಡಾರಿ(34) ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ವಿಟ್ಲ-ಕಾಸರಗೋಡು ರಸ್ತೆಯ ಬಾರೊಂದರ ಎದುರು ಕುಡಿದ ಮತ್ತಿನಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹೊಡೆದಾಟದಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ.
ಕೆಲವು ತಿಂಗಳ ಹಿಂದೆ ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಬಳಿಕ ಇಬ್ಬರ ಪೈಕಿ ಗುರುರಾಜ್ ಬಳ್ಳಾಲ್ ತಲೆಮರೆಸಿಕೊಂಡಿದ್ದ. ಆತನಿಗಾಗಿ ವಿಟ್ಲ ಪೊಲೀಸರು ಹುಡುಕಾಟ ನಡೆಸಿದ್ದರು. ಈತನ ವಿರುದ್ಧ ವಿಟ್ಲ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು ರೌಡಿ ಶೀಟರ್ ಪಟ್ಟಿಯಲ್ಲಿದ್ದ ಎನ್ನಲಾಗಿದೆ. ಗುರುರಾಜ್ ಬಳ್ಳಾಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.