ವಿಮಾನದಲ್ಲಿದ್ದ 29 ಮಂದಿಯೂ ಮೃತರಾಗಿದ್ದಾರೆಂದು ಪರಿಗಣನೆ: ಐಎಎಫ್
ಹೊಸದಿಲ್ಲಿ, ಸೆ.15: ಜುಲೈ 22ರಂದು ಚೆನ್ನೈಯಿಂದ ಪೋರ್ಟ್‌ಬ್ಲೇರ್‌ಗೆ 29 ಜನರೊಂದಿಗೆ ಹಾರುತ್ತಿದ್ದ ಭಾರತೀಯ ವಾಯುದಳದ ಎಎನ್-32 ವಿಮಾನವು ಸಮುದ್ರದ ಮೇಲೆ ಕಾಣೆಯಾಗಿತ್ತು. ಅದರೊಳಗಿದ್ದ ಎಲ್ಲರೂ ‘ಮೃತಪಟ್ಟಿದ್ದಾರೆಂದು ಪರಿಗಣಿಸಲಾಗಿದೆ’ ಎಂದು ಪ್ರಯಾಣಿಕರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ.
ಆದಾಗ್ಯೂ ಸಮುದ್ರದೊಳಗೆ ನತದೃಷ್ಟ ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಲಭ್ಯ ಸಾಂದರ್ಭಿಕ ಸಾಕ್ಷಗಳ ಎಚ್ಚರಿಕೆಯ ಪರಿಶೀಲನೆ, ಕೈಗೊಳ್ಳಲಾದ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬೆಳಕಿನಲ್ಲಿ ವಿಮಾನದಲ್ಲಿದ್ದ ಕಾಣೆಯಾಗಿರುವ ಸಿಬ್ಬಂದಿ ಬದುಕಿರುವ ಸಾಧ್ಯತೆಯಿಲ್ಲವೆಂದು ತನಿಖೆಯು ತೀರ್ಮಾನಿಸಿದೆ. ತಮ್ಮ ಪುತ್ರ/ಪುತ್ರಿ ಮಾರಣಾಂತಿಕ ಗಾಯಗೊಂಡಿದ್ದಾರೆಂದು ಭಾವಿಸಬೇಕೆಂದು ತನಿಖೆಯು ಭಾರೀ ವಿಶಾದದಿಂದ ತಿಳಿಸುತ್ತದೆಂದು ಐಎಎಫ್, ವಿಮಾನದಲ್ಲಿದ್ದವರ ಕುಟುಂಬಗಳಿಗೆ ಕಳುಹಿಸಿರುವ ಆ.24ರ ದಿನಾಂಕವಿದ್ದ ಪತ್ರ ಹೇಳಿದೆ.
ಕುಟುಂಬಗಳು ವಿಮೆ ಹಾಗೂ ಇತರ ಆಡಳಿತಾತ್ಮಕ ವಿಧಿವಿಧಾನಗಳನ್ನು ಮುಂದುವರಿಸಲು ಸಾಧ್ಯವಾಗುವಂತೆ ಈ ಸೂಚನೆ ನೀಡಲಾಗಿದೆಯೆಂದು ಐಎಎಫ್ ಮೂಲಗಳು ತಿಳಿಸಿವೆ.