ಕೊಣಾಜೆ ಗ್ರಾಮಪಂಚಾಯತ್‌ನ ಪ್ರಥಮ ಗ್ರಾಮಸಭೆ
ಕೊಣಾಜೆ, ಸೆ.15: ಇತ್ತೀಚೆಗೆ ಕೊಣಾಜೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದಿರುವ ಕಾರಣ ಅಲ್ಲಿರುವ ಎಲ್ಲಾ ಬ್ಯಾನರನ್ನು ತೆಗೆಸಲಾಗಿತ್ತು. ಆದರೆ ಕೆಲವೊಂದು ಬ್ಯಾನರನ್ನು ಅಲ್ಲೇ ಉಳಿಸಿಕೊಳ್ಳಲಾಗಿದೆ. ಇದರಿಂದ ಭೇದಭಾವ ಉಂಟಾಗಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಯಾವುದೇ ಬ್ಯಾನರ್ ಅಳವಡಿಸಲು ಪಂಚಾಯತ್ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕೊಣಾಜೆ ಗ್ರಾಮ ಪಂಚಾಯತ್‌ನ 2016-17ನೆ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗುರುವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮಸ್ಥರ ಆಗ್ರಹಕ್ಕೆ ಉತ್ತರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್, ಈಗಾಗಲೇ ಬ್ಯಾನರ್‌ನಿಂದಾಗುವ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದು, ಇನ್ನು ಮುಂದೆ ಬ್ಯಾನರ್ ಅಳವಡಿಸುವವರು ಕಡ್ಡಾಯವಾಗಿ ಪಂಚಾಯತ್‌ನ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಮಾತ್ರವಲ್ಲದೆ, ಪರವಾನಿಗೆ ನಂಬರನ್ನು ಬ್ಯಾನರ್‌ನಲ್ಲಿ ಅಳವಡಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪಂಚಾಯತ್ ನಿರ್ಧರಿಸಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಮಾತನಾಡಿ, ಕೇವಲ 15 ಶೇ. ಜನರು ಮಾತ್ರ ಬ್ಯಾನರ್‌ಗೆ ಪರವಾನಿಗೆ ಪಡೆಯುತ್ತಾರೆ. ಉಳಿದವರು ಮನಬಂದಂತೆ ಬ್ಯಾನರ್ ಅಳವಡಿಸುತ್ತಾರೆ. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದರು.
ಕೊಣಾಜೆ ಗ್ರಾಮದ ಬೆಳ್ಮ ಮಾರಿಗುಡಿ ಬಳಿಯ ನಿವಾಸಿಗಳಿಗೆ ಕುಡಿಯುವ ನೀರಿನ ಯೋಜನೆಯ ಪಂಪ್‌ಗೆ ಮೆಸ್ಕಾಂನಿಂದ ತಾತ್ಕಾಲಿಕವಾಗಿ ಪರ್ಮಿಶನ್ ತೆಗೆದು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವಧಿ ಮೀರಿದ ಕಾರಣ ಮೆಸ್ಕಾಂನವರು ಸಂಪರ್ಕವನ್ನು ಕಡಿತಗೊಳಿಸಿದ್ದು ಆದರೆ ಪಂಚಾಯತ್‌ಗೆ ಈ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೆಳ್ಮ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಆಗ ಪಂಚಾಯತ್ ಅಧ್ಯಕ್ಷರು ಕುಡಿಯುವ ನೀರಿನ ತಿಂಗಳ ಬಿಲ್ ಸರಿಯಾಗಿ ಪಾವತಿಸಬೇಕು ಎಂದು ಹೇಳಿದಾಗ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ವಿದ್ಯುತ್ ಸಂಪರ್ಕಕ್ಕೆ ಶೀಘ್ರವೇ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸುನಿತಾ ಭಾಗವಹಿಸಿದ್ದರು.