×
Ad

ಪುತ್ತೂರು: ಮಂಗಳೂರು ವಿ.ವಿ. ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಅಳವಡಿಕೆಗೆ ಎಬಿವಿಪಿ ಖಂಡನೆ

Update: 2016-09-15 19:53 IST

ಪುತ್ತೂರು, ಸೆ.15: ಮಂಗಳೂರು ವಿಶ್ವವಿದ್ಯಾನಿಲಯದ ಶೌಚಾಲಯದಲ್ಲಿ ಮೊಬೈಲ್ ಕೆಮರಾ ಇರಿಸಿ ಚಿತ್ರಿಕರಣ ನಡೆಸುವ ಮೂಲಕ ಮಹಿಳಾ ದೌರ್ಜನ್ಯ ಮತ್ತು ಮಹಿಳಾ ಹಕ್ಕಿನ ಉಲ್ಲಂಘನೆ ನಡೆದಿದ್ದರೂ ವಿಶ್ವವಿದ್ಯಾನಿಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ವಿದ್ಯಾರ್ಥಿಗಳ ಸುರಕ್ಷತೆಯ ವಿಚಾರದಲ್ಲಿ ಆತಂಕ ಮೂಡಿಸಿದೆ ಎಂದು ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ ಡಾ.ರೋಹಿಣಾಕ್ಷ ಶಿರ್ಲಾಲು ಆರೋಪಿಸಿದ್ದಾರೆ.

ಅವರು ಮಂಗಳೂರು ವಿ.ವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕೆಮರಾ ಇರಿಸಿ ಚಿತ್ರಿಕರಣಕ್ಕೆ ಯತ್ನಿಸಿದ ಘಟನೆ ಖಂಡಿಸಿ ಗುರುವಾರ ಎಬಿವಿಪಿ ವತಿಯಿಂದ ಮಿನಿವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಬುದ್ಧಿಜೀವಿಗಳು ಮಂಗಳೂರು ವಿ.ವಿ.ಯ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಅಳವಡಿಸಿದ ಅಮಾನವೀಯ ಪ್ರಕರಣದ ತನಿಖೆ ವಿಳಂಬ ಕಂಡರೂ ಚಕಾರ ಎತ್ತಿಲ್ಲ ಎಂದು ದೂರಿದ ಅವರು, ಘಟನೆ ನಡೆದು 22 ದಿನಗಳ ಅನಂತರ ಆರೋಪಿಯನ್ನು ಬಂಧಿಸಲಾಗಿದೆ. ಕ್ಯಾಮರಾ ಪತ್ತೆಯಾದ ಕೂಡಲೇ ವಿದ್ಯಾರ್ಥಿನಿಯು ವಿ.ವಿ.ಯ ಮುಖ್ಯಸ್ಥರಿಗೆ ದೂರು ನೀಡಿದ್ದರೂ ಆಂತರಿಕ ತನಿಖೆ ನೆಪದಲ್ಲಿ ನಾಲ್ಕು ದಿನ ಕಾಲಹರಣ ಮಾಡಲಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಈ ನಡೆ ಪ್ರಶ್ನಾರ್ಹವಾಗಿದೆ ಎಂದರು.

ಪುತ್ತೂರು ಜಿಲ್ಲಾ ಸಂಚಾಲಕ ಪ್ರಜ್ವಲ್ ಕುಮಾರ್ ಮಾತನಾಡಿ, ಮಂಗಳೂರು ವಿ.ವಿಯಲ್ಲಿ ಅನೇಕ ಅಕ್ರಮಗಳು ನಡೆದಿರುವ ಅನುಮಾನಗಳು ವಿದ್ಯಾರ್ಥಿಗಳ ಸುರಕ್ಷತೆಯಿಂದ ತೊಡಗಿ ಅಂಕಪಟ್ಟಿಯ ತನಕವೂ ಹಬ್ಬಿದೆ. ಇಂತಹ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಮುಂದಾಳುಗಳಾದ ಪ್ರಶಾಂತ್, ಸಂದೇಶ್, ಮನೀಷಾ ಶೆಟ್ಟಿ, ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು. ನಗರದ ವಿವಿಧ ಕಾಲೇಜುಗಳ ಎಬಿವಿಪಿ ಘಟಕದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News