×
Ad

ಮಂಗಳೂರು ವಿವಿ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟಿದ್ದ ಆರೋಪಿಗೆ ಜಾಮೀನು

Update: 2016-09-15 20:21 IST

ಮಂಗಳೂರು, ಸೆ.15: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಸಾಯನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ರೆಕಾರ್ಡಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ವಿವಿಯ ವಿದ್ಯಾರ್ಥಿ ಸಂತೋಷ್ (22)ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾನೆ.

ಮಂಗಳೂರು ವಿಶ್ವವಿದ್ಯಾನಿಲಯದ ಬಯೋಟಕ್ನಾಲಜಿ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ವಿವಿಯ ದ್ವಿತೀಯ ಎಂಎಸ್‌ಸಿ (ಮರೈನ್ ಜಿಯಾಲಜಿ)ಯ ವಿದ್ಯಾರ್ಥಿ, ಸುಳ್ಯದ ಮರೋಳಿ ಎಡಮಂಗಳದ ನಿವಾಸಿ ಸಂತೋಷ್ ಎಂ. ಎಂಬಾತನನ್ನು ಬಂಧಿಸಲಾಗಿತ್ತು.

ನಿನ್ನೆ ರಾತ್ರಿಯೇ ಆತನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು. ಇಂದು ಬೆಳಗ್ಗೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಕೊಣಾಜೆ ಠಾಣಾ ಪೊಲೀಸರು ತಿಳಿಸಿದ್ದಾರೆ.

ಆತನ ವಿರುದ್ಧ ಐಟಿ ಆ್ಯಕ್ಟ್ 66 ಹಾಗೂ ಸೆಕ್ಷನ್ 354 ಸಿ ಯಡಿ ಪ್ರಕರಣ ದಾಖಲಿಸಲಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಬಯೋಟಕ್ನಾಲಜಿ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದ ಮೇಲ್ಛಾವಣಿಯ ಹಲಗೆಗೆ ರಂಧ್ರ ಕೊರೆದು ಮೊಬೈಲ್ ಕ್ಯಾಮರವನ್ನು ಅಳವಡಿಸಿದ್ದ. ಮೊಬೈಲ್ ಕ್ಯಾಮರಾ ಸರಿಹೊಂದುವಂತೆ ಪೇಪರ್ ಸುತ್ತಿ ಅದಕ್ಕೆ ನೀಲಿ ಬಣ್ಣ ಬಳಿದಿದ್ದ. ಮೊಬೈಲ್ ಕ್ಯಾಮಾರಾದಲ್ಲಿ ನಿರಂತರವಾಗಿ ದೃಶ್ಯಾವಳಿಗಳು ಸೆರೆಹಿಡಿಯಲು ಸಾಧ್ಯವಾಗುವಂತೆ ಮೊಬೈಲ್‌ಗೆ ಪವರ್ ಬ್ಯಾಂಕ್ ಕೂಡಾ ಅಳವಡಿಸಿದ್ದ. ವಿದ್ಯಾರ್ಥಿನಿಯೊಬ್ಬರು ಶೌಚಾಲಯದಲ್ಲಿ ಇದನ್ನು ಗಮನಿಸಿ, ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡುವ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು.

ಆದರೆ, ಈ ಪ್ರಕರಣವನ್ನು ವಿವಿಯ ಮಹಿಳಾ ದೌರ್ಜನ್ಯ ತಡೆ ಸಮಿತಿಯ ತನಿಖೆಗೆ ಹಸ್ತಾಂತರಿಸಲಾಗಿತ್ತು. ಪ್ರಕರಣ ಬೆಳಕಿಗೆ ಬಂದು ಸುಮಾರು ಒಂದು ವಾರದ ಬಳಿಕ ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅದರಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಎಂ. ಚಂದ್ರಶೇಖರ್‌ರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ಠಾಣಾಧಿಕಾರಿಗಳನ್ನು ಒಳಗೊಂಡಂತೆ ಎಸಿಪಿ ಶ್ರುತಿ ನೇತೃತ್ವದಲ್ಲಿ ರಚಿಸಲಾದ ತನಿಖಾ ತಂಡವು ಆರೋಪಿಯನ್ನು ಪತ್ತೆ ಹಚ್ಚಿತ್ತು. ಸಾಕಷ್ಟು ಸುಳಿವುಗಳು ಈಗಾಗಲೇ ದೊರಕಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News