ಅನುಕಂಪವೇನೋ ಸರಿ,ಆದರೆ ಬೀದಿನಾಯಿಗಳು ಪಿಡುಗಾಗಲು ಬಿಡಬಾರದು: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಸೆ.15: ಬೀದಿನಾಯಿಗಳಿಗೆ ಅನುಕಂಪ ತೋರಿಸಬೇಕು, ಆದರೆ ಅವು ಸಮಾಜಕ್ಕೆ ಪಿಡುಗಾಗಲು ಅವಕಾಶ ನೀಡಬಾರದು. ಇಂತಹ ಸ್ಥಿತಿಯನ್ನು ಎದುರಿಸಲು ಸಮತೋಲನವೊಂದನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಕರಣದಲ್ಲಿ ಮುಖ್ಯ ಅರ್ಜಿದಾರ ಸಂಸ್ಥೆಯಾಗಿರುವ ಆ್ಯನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ(ಎಡಬ್ಲುಬಿಐ) ಸಲ್ಲಿಸಿರುವ ಅನುಷ್ಠಾನ ಮಾರ್ಗಸೂಚಿಯನ್ನೊಳಗೊಂಡಿರುವ ಪರಿಷ್ಕೃತ ಮಾದರಿಯ ಎಲ್ಲ ಮಗ್ಗಲುಗಳ ಬಗ್ಗೆ ವಿವರವಾದ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು.ಲಲಿತ್ ಅವರ ಪೀಠವು ಬುಧವಾರ ತಿಳಿಸಿತು. ತಾನು ಪ್ರಸ್ತಾಪಿಸಿರುವ ಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ಕೇಂದ್ರೀಯ ಸಚಿವಾಲಯಗಳ ಪ್ರಾತಿನಿಧ್ಯವನ್ನೊಳಗೊಂಡ ಕೇಂದ್ರೀಯ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು ಎಂದೂ ಎಡಬ್ಲುಬಿಐ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದೆ.
ಸಮಾಧಾನಕರ ಫಲಿತಾಂಶಗಳೊಂದಿಗೆ ಪ್ರಾಣಿ ಜನನ ನಿಯಂತ್ರಣ ಯೋಜನೆಯನ್ನು ಜಾರಿಗೊಳಿಸಲು ಎಲ್ಲ ಪಾಲುದಾರರ ನಡುವೆ ಉತ್ತಮ ಸಂವಾದ ಮತ್ತು ಕೇಂದ್ರ ಹಾಗೂ ರಾಜ್ಯಗಳಿಂದ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದೆ ಎಂದು ಎಡಬ್ಲುಬಿಐ ಪರ ಹಿರಿಯ ವಕೀಲ ಸಿ.ಎ.ಸುಂದರಂ ಅವರು ತಿಳಿಸಿದರು.
ವಿವಿಧ ಎನ್‌ಜಿಒಗಳು ಮತ್ತು ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಗಳ ಗೊಂಚಲಿನ ವಿಚಾರಣೆಯನ್ನು ನಡೆಸುತ್ತಿರುವ ಪೀಠವು ಮಂದಿನ ವಿಚಾರಣೆಯನ್ನು ಅ.4ಕ್ಕೆ ನಿಗದಿಗೊಳಿಸತಲ್ಲದೆ,ಪ್ರಾಣಿ ಜನನ ನಿಯಂತ್ರಣ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.