ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ನಿರಂಜನ್ ಭಟ್ ಸಿಐಡಿ ಕಸ್ಟಡಿಗೆ
ಉಡುಪಿ, ಸೆ.15: ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಐವರು ಆರೋಪಿಗಳ ಪೈಕಿ ನಿರಂಜನ್ ಭಟ್‌ನನ್ನು ಹೆಚ್ಚಿನ ತನಿಖೆಗಾಗಿ ಉಡುಪಿ ನ್ಯಾಯಾಲಯ ಎರಡು ದಿನಗಳ ಕಾಲ ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಹಾಗೂ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್, ರಾಘವೇಂದ್ರನನ್ನು ಪೊಲೀಸರು ಸೆ.6ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆ ವೇಳೆ ನ್ಯಾಯಾಧೀಶ ರಾಜೇಶ್ ಕರ್ಣಂ ಎಲ್ಲ ಆರೋಪಿಗಳನ್ನು ಮತ್ತೆ ಸೆ.19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಸಿಐಡಿಯ ಮನವಿ ಮೇರೆಗೆ ಆರೋಪಿಗಳನ್ನು ಪ್ರತ್ಯೇಕ ಜೈಲಿನಲ್ಲಿ ಇರಿಸುವಂತೆ ಆದೇಶ ನೀಡಿದ್ದರು. ಅದ ರಂತೆ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಮಂಗಳೂರು ಜೈಲಿನಲ್ಲಿ ಮತ್ತು ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರನನ್ನು ಹಿರಿಯಡ್ಕ ಜೈಲಿನಲ್ಲಿ ಇರಿಸಲಾಗಿತ್ತು.
ಇದರ ನಂತರ ಸಿಓಡಿ ತನಿಖಾಧಿಕಾರಿ ಡಿವೈಎಸ್ಪಿ ಚಂದ್ರಶೇಖರ್, ಆರೋಪಿಗಳ ಪೈಕಿ ನಿರಂಜನ್ ಭಟ್‌ನನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಅದರ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಧೀಶರು ಆರೋಪಿ ನಿರಂಜನ್ ಭಟ್‌ನನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿ, ಸೆ.17ರಂದು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆದೇಶ ನೀಡಿದರು.