ಭಾರತದ ಮಾಜಿ ವೇಗಿ ಬಾಲಾಜಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ
►2003ರಲ್ಲಿ ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು.
► ಗಾಯದ ಸಮಸ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಮಾಡಿತ್ತು.
►2005ರಲ್ಲಿ ಪಾಕ್ ನೆಲದಲ್ಲಿ ಟೆಸ್ಟ್‌ನಲ್ಲಿ ಐತಿಹಾಸಿಕ ಸರಣಿ ಗೆಲುವಿಗೆ ನೆರವಾಗಿದ್ದರು.
ಹೊಸದಿಲ್ಲಿ, ಸೆ.15: ಭಾರತದ ಮಾಜಿ ವೇಗಿ ತಮಿಳುನಾಡಿನ ಲಕ್ಷ್ಮೀಪತಿ ಬಾಲಾಜಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಇಂದು ವಿದಾಯ ಪ್ರಕಟಿಸಿದ್ದಾರೆ.
ಪ್ರಸ್ತುತ ಚೊಚ್ಚಲ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಟುಟಿ ಪ್ಯಾಟ್ರಾಯಿಟ್ಸ್ ಪರ ಆಡುತ್ತಿರುವ ಬಾಲಾಜಿ ಐಪಿಎಲ್ ಮತ್ತು ಟಿಎನ್‌ಪಿಎಲ್ ಸೇರಿದಂತೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.
34ರ ಹರೆಯದ ಬಾಲಾಜಿ 2000, ನ.18ರಂದು ವಡೋಧರದಲ್ಲಿ ವಿಂಡೀಸ್ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. 2003, ಅ.8ರಿಂದ 13ರ ತನಕ ಅಹ್ಮದಾಬಾದ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ದ ಟೆಸ್ಟ್‌ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು.
ಎಂಟು ಟೆಸ್ಟ್ ಪಂದ್ಯಗಳನ್ನು ಆಡಿರುವ ಬಾಲಾಜಿ ಪಾಕಿಸ್ತಾನ ವಿರುದ್ಧ ಅಂತಿಮ ಟೆಸ್ಟ್‌ನಲ್ಲಿ 7 ವಿಕೆಟ್ ಉಡಾಯಿಸಿ ಭಾರತಕ್ಕೆ 2-1 ಅಂತರದಲ್ಲಿ ಸರಣಿ ಗೆಲುವಿಗೆ ನೆರವಾಗಿದ್ದರು.
‘‘ಪಾಕಿಸ್ತಾನ ನೆಲದಲ್ಲಿ ಭಾರತಮೊದಲ ಬಾರಿ ಸರಣಿ ಗೆಲುವು ದಾಖಲಿಸಿತ್ತು. ನಾನು ಪಡೆದಿರುವ ಒಟ್ಟು ಏಳು ವಿಕೆಟ್‌ಗಳಲ್ಲಿ ಪಾಕ್‌ನ ಲೆಜೆಂಡ್ ಇಂಝಮಮ್ ಉಲ್ ಹಕ್ ವಿಕೆಟ್ ಪಡೆದಿರುವುದು ಬದುಕಿನ ಸ್ಮರಣೀಯ ಕ್ಷಣವಾಗಿತ್ತು’’ ಎಂದು ಬಾಲಾಜಿ ಹೇಳಿದ್ದಾರೆ.
ಗಾಯಯಿಂದಾಗಿ ಬಾಲಾಜಿ ಸಮಸ್ಯೆ ಎದುರಿಸಿದ್ದರು. ಬಾಲಾಜಿ 2001-02ರಲ್ಲಿ ತಮಿಳುನಾಡು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪ್ರಥಮ ದರ್ಜೆ ಪಂದ್ಯವನ್ನಾಡಿದ್ದರು. ಅದೇವರ್ಷ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು.
ಬಾಲಾಜಿ 8 ಟೆಸ್ಟ್‌ಗಳನ್ನು ಆಡಿದ್ದಾರೆ. 51 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ 31, ಪಡೆದಿರುವ ವಿಕೆಟ್ 27, ಅತ್ಯುತ್ತಮ ಪ್ರದರ್ಶನ 76ಕ್ಕೆ 5 ವಿಕೆಟ್. 30 ಏಕದಿನ ಪಂದ್ಯಗಳಲ್ಲಿ 120 ರನ್, ಗರಿಷ್ಠ ವೈಯಕ್ತಿಕ ಸ್ಕೋರ್ 21, ವಿಕೆಟ್ 34 , ಅತ್ಯುತ್ತಮ 48ಕ್ಕೆ 4 ವಿಕೆಟ್.
5 ಟ್ವೆಂಟಿ-20 ಪಂದ್ಯಗಳಲ್ಲಿ 10 ವಿಕೆಟ್, ಅತ್ಯುತ್ತಮ ಪ್ರದರ್ಶನ 19ಕ್ಕೆ 3. 106 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,202 ರನ್, ಗರಿಷ್ಠ ಸ್ಕೋರ್ 49, ವಿಕೆಟ್ 330 ಮತ್ತು ಅತ್ಯುತ್ತಮ ಪ್ರದರ್ಶನ 42ಕ್ಕೆ 7 ವಿಕೆಟ್.